ಬಿಜೆಪಿ ಗೆದ್ದರೆ ಪಂಚ ಗ್ಯಾರಂಟಿ ರದ್ದು : ಮುನಿಯಾಲು ಉದಯಕುಮಾರ್‌ ಶೆಟ್ಟಿ

ಕಾರ್ಕಳ : ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕ ಸರಕಾರ ಕೊಡಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಸಾಂವಿಧಾನಿಕ ತಿದ್ದುಪಡಿಯೊಂದಿಗೆ ಮುರಿಯುವ ಸಾಧ್ಯತೆಯಿದೆ. ಫಲಾನುಭವಿಗಳು ಬದುಕಿನ ಅಸ್ತಿತ್ವಕ್ಕಾಗಿ ಬಿಜೆಪಿಯ ವಿರುದ್ಧ ತಮ್ಮ ಹಕ್ಕು ಚಲಾಯಿಸಿ ಆ ಪಕ್ಷ ಅಧಿಕಾರಕ್ಕೇ ಬಾರದಂತೆ ನೋಡಿಕೊಳ್ಳಬೇಕಾದುದು ಇಂದಿನ ಆದ್ಯತೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.
ನಗರದ ಪ್ರಕಾಶ್ ಹೋಟೇಲ್ ಸಭಾಂಗಣದಲ್ಲಿ‌ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಪುರಸಭಾ ವ್ಯಾಪ್ತಿಯ ಕಾಯಕರ್ತರ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರಕಾರ ಜಾರಿಗೆ ತಂದ ಕರಾಳ ಕೃಷಿ ಕಾಯಿದೆಗಳನ್ನು ಬಜೆಟ್ ಮಂಡನೆಯ ಸಂದರ್ಭದಲ್ಲಿ ಹಿಂದೆಗೆದುಕೊಂಡು ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ಸರಿಯಾದ ಉತ್ತರ ನೀಡಿದೆ. ಕೃಷಿ ಪ್ರಧಾನವಾದ ಈ ದೇಶದ ಕೃಷಿಯೊಂದಿಗಿನ ಸರ್ವಾಂಗೀಣ ಅಭಿವೃದ್ದಿ ಕಾಂಗ್ರೆಸ್ಸಿನಿಂದಲ್ಲದೆ ಅನ್ಯ ಪಕ್ಷಗಳಿಂದ ಸಾಧ್ಯವಿಲ್ಲ ಎಂದರು.
‌‌ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಮಾತಾಡಿ, ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿ ಎಂದು ಅಧಿಕಾರಕ್ಕೆ ಬಂದು ಇದೀಗ 2.50 ಕೋಟಿ ಮಂದಿ ಉದ್ಯೋಗಕ್ಕಾಗಿ ಪರದೇಶಗಳನ್ನು ಅವಲಂಬಿಸುವಂತೆ ಮಾಡಿದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಸುಳ್ಳಿನ ತಳಹದಿಯ ಮೇಲೆ ನಿಂತಿದೆ. ಸಂವಿಧಾನ ಬದಲಿಸುವುದು ಇವರ ಅಂತಿಮ ಗುರಿಯಾಗಿದೆ. ಇದು ಸರ್ವಾಧಿಕಾರದ ಲಕ್ಷಣವಾಗಿದ್ದು ಇದನ್ನು ಅವರದ್ದೇ ಪಕ್ಷದ ನಾಯಕರು ಬಯಲು ಮಾಡಿದ್ದಾರೆ. ಇದನ್ನು ಯಾವತ್ತೂ ಕಾಂಗ್ರೆಸ್ ಸಹಿಸದು. ಸಂವಿಧಾನದ ರಕ್ಷಣೆ ಕಾಂಗ್ರೆಸ್ಸಿನ ಅಂತಿಮ ಗುರಿಯಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪುರಸಭಾಧ್ಯಕ್ಷ ಸುಬೀತ್ ಕುಮಾರ್, ಪ್ರತಿಮಾ ರಾಣೆ, ಸುರೇಂದ್ರ ರಾಣೆ ಉಪಸ್ಥಿತರಿದ್ದರು. ಬ್ಲಾಕ್ ವಕ್ತಾರ ಶುಭದ ರಾವ್ ಪ್ರಸ್ತಾವನೆಗೈದು ಸ್ವಾಗತಿಸಿ, ವಂದಿಸಿದರು.

















































error: Content is protected !!
Scroll to Top