ಶಿವಮೊಗ್ಗ : ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುವುದು ಕಾಂಗ್ರೆಸ್‌ನ ಕೆಲಸವಾಗಿದೆ. ಕರ್ನಾಟಕದಲ್ಲಿ ನಾಲ್ವರು ಸಿಎಂಗಳ ಜೊತೆಗೆ ದಿಲ್ಲಿಯ ಕಲೆಕ್ಷನ್ ಮಿನಿಸ್ಟರ್ ಬೇರೆ ಇದ್ದು, ಕರ್ನಾಟಕವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಳಿ ಅಭಿವೃದ್ಧಿಯ ಅಜೆಂಡಾ ಇಲ್ಲ. ಸುಳ್ಳು ಹೇಳುವುದೇ ಕಾಂಗ್ರೆಸ್‌ನ ಮೊದಲ ಅಜೆಂಡಾ, ತಮ್ಮ ಸುಳ್ಳುಗಳನ್ನು ಸಮರ್ಥಿಸಿಕೊಳ್ಳಲು ಮತ್ತೊಂದು ಸುಳ್ಳು ಹೇಳುವುದು ಅವರ ಎರಡನೇ ಅಜೆಂಡಾ. ಕರ್ನಾಟಕದಲ್ಲೂ ಕಾಂಗ್ರೆಸ್ ಇದನ್ನೇ ಮಾಡಿದೆ. ಸರ್ಕಾರ ರಚಿಸಿದ ಬಳಿಕ ಜನರಿಗೆ ಸುಳ್ಳಿನ ಮೇಲೆ ಸುಳ್ಳುಗಳನ್ನು ಹೇಳಿದೆ. ಆ ಸುಳ್ಳುಗಳನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತದೆ. ಮೋದಿ ಮೇಲೆ ಆರೋಪ ಮಾಡುತ್ತದೆ. ಕಾಂಗ್ರೆಸ್‌ನ ಒಂದೇ ಒಂದು ಮಂತ್ರ ಅಂದರೆ ಅದು ಜನರನ್ನು ಲೂಟಿ ಮಾಡುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ನಾಲ್ವರು ಸಿಎಂ
ಕರ್ನಾಟಕದಲ್ಲಿ ಇರುವುದು ಒಬ್ಬ ಮುಖ್ಯಮಂತ್ರಿಯಾದರೂ ಛಾಯಾ ಮುಖ್ಯಮಂತ್ರಿ ಇಬ್ಬರು ಇದ್ಧಾರೆ. ಇನ್ನೊಬ್ಬರು ಸೂಪರ್ ಸಿಎಂ ಇದ್ದಾರೆ. ದೆಹಲಿಯಿಂದ ಒಬ್ಬರು ಬಂದು ನಿರಂತರವಾಗಿ ಹಣ ವಸೂಲಿ ಮಾಡಿಕೊಂಡು ಹೋಗುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಉಲ್ಲೇಖಿಸದೇ ಮೋದಿ ಟೀಕಿಸಿದರು.

ಹಿಂದೂ ಸಮಾಜದ ಶಕ್ತಿಯನ್ನು ನಿರ್ಮೂಲನೆ ಮಾಡುವುದಾಗಿ ಕಾಂಗ್ರೆಸ್‌ನವರು ಭಾನುವಾರ ಹೇಳಿದ್ದಾರೆ. ಬಾಳಾಸಾಹೇಬ್ ಠಾಕ್ರೆಯವರ ಆತ್ಮಕ್ಕೆ ಎಷ್ಟು ದುಃಖವಾಗಿರಬಹುದು. ಆದರೆ, ನಮ್ಮ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ನಾವು ಮಾಡಬೇಕಿದೆ. ನಾವು ಚಂದ್ರಯಾನಕ್ಕೆ ಶಿವಶಕ್ತಿ ಎಂದು ಹೆಸರಿಟ್ಟೇವು. ಆದರೆ, ಭಾರತ ಮಾತೆಯ ಶಕ್ತಿಯ ಸರ್ವನಾಶಕ್ಕೆ ಕಾಂಗ್ರೆಸ್ ಹೆಜ್ಜೆ ಹಾಕಿದೆ. ಭಾರತ ಮಹಿಳೆಯರು, ಮಕ್ಕಳಿಗೆ ಕಾಂಗ್ರೆಸ್‌ನಿಂದ ಅವಮಾನವಾಗಿದೆ. ನಾರಿ ಶಕ್ತಿ ಆಶೀರ್ವಾದ ನನ್ನ ಅತಿ ದೊಡ್ಡ ರಕ್ಷಾ ಕವಚ ಎಂದು ಯಾ ದೇವಿ ಸರ್ವತ್ರ ಸ್ತೋತ್ರವನ್ನು ಮೋದಿ ಶಿವಮೊಗ್ಗದಲ್ಲಿ ಉಲ್ಲೇಖಿಸಿದರು.
ಜೂನ್ 4ಕ್ಕೆ 400 ಸೀಟ್‌ಗಳು ಎನ್‌ಡಿಗೆ ಬರಲಿವೆ. ವಿಕಸಿತ ಭಾರತಕ್ಕಾಗಿ, ವಿಕಸಿತ ಕರ್ನಾಟಕಕ್ಕಾಗಿ ಹಾಗೂ ಭ್ರಷ್ಟಾಚಾರಿಗಳ ವಿರುದ್ಧ ಹೋರಾಡಲು, ಯುವಜನರ ಅಭಿವೃದ್ಧಿಗಾಗಿ, ರೈತರ ಅಭಿವೃದ್ಧಿಗಾಗಿ 400ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಎನ್‌ಡಿಎ ಗೆಲ್ಲಬೇಕಿದೆ. ಆದ್ದರಿಂದ ಕರ್ನಾಟಕದ 28 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.
5 ಕ್ಷೇತ್ರಗಳ ಅಭ್ಯರ್ಥಿ ಪರ ಮತಯಾಚನೆ
ಉಡುಪಿ – ಚಿಕ್ಕಮಗಳೂರು ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ, ದಕ್ಷಿಣ ಕನ್ನಡ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್, ಶಿವಮೊಗ್ಗ ಅಭ್ಯರ್ಥಿ ಬಿವೈ ರಾಘವೇಂದ್ರ, ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಪರ ಪ್ರಧಾನಿ ನರೇಂದ್ರ ಮೋದಿ ಮತಯಾಚಿಸಿದರು.










































































