ಲೋಕಸಭಾ ಚುನಾವಣಾ ದಿನಾಂಕ ಘೋಷಣೆಗೆ ಕ್ಷಣಗಣನೆ

ದೆಹಲಿ : ಲೋಕಸಭೆ ಚುನಾವಣೆ 2024ರ ಚುನಾವಣಾ ದಿನಾಂಕ, ವೇಳಾಪಟ್ಟಿ ಮತ್ತು ಕ್ಷೇತ್ರವಾರು ವಿವರವನ್ನು ಭಾರತ ಚುನಾವಣಾ ಆಯೋಗ ಇಂದು ಪ್ರಕಟಗೊಳಿಸಲಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಮುಕ್ತ ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಮ್ಮ ಉದ್ದೇಶವಾಗಿದೆ. ದೇಶಾದ್ಯಂತ 97 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ದೇಶಾದ್ಯಂತ 10.5 ಲಕ್ಷ ಮತದಾನ ಕೇಂದ್ರಗಳು ಇದ್ದು, ಚುನಾವಣಾ ಕರ್ತವ್ಯಕ್ಕೆ ಒಂದೂವರೆ ಕೋಟಿ ಸಿಬ್ಬಂದಿ ಬಳಕೆ ಮಾಡಲಾಗುವುದು. ಮತದಾನಕ್ಕೆ ಒಟ್ಟು 55 ಲಕ್ಷ ಇವಿಎಂಗಳ ವ್ಯವಸ್ಥೆ ಮಾಡಲಾಗುವುದು ಎಂದರು.

ದೇಶದಲ್ಲಿ 1.8 ಕೋಟಿ ಮತದಾರರು ಮೊದಲ ಬಾರಿಗೆ ಮತಚಲಾವಣೆ ಮಾಡಲಿದ್ದಾರೆ , 49.7 ಕೋಟಿ ಪುರುಷರು, 47.1 ಕೋಟಿ ಮಹಿಳಾ ಮತದಾರರಿದ್ದಾರೆ. 48 ಸಾವಿರ ತೃತೀಯ ಲಿಂಗಿ ಮತದಾರರು ಮತಚಲಾಯಿಸಲಿದ್ದಾರೆ. 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಹಾಗೂ 19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ.
85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ವ್ಯವಸ್ಥೆ ಮಾಡಲಾಗುವುದು. 40%ಕ್ಕೂ ಹೆಚ್ಚು ದಿವ್ಯಾಂಗರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. 

ಚುನಾವಣೆಯಲ್ಲಿ ಹಿಂಸೆಗೆ ಅವಕಾಶ ನೀಡಲ್ಲ ಎಂದು ರಾಜೀವ್ ಕುಮಾರ್ ಹೇಳಿದರು. ಎಲ್ಲಾ ಕಡೆ ಚೆಕ್​ಪೋಸ್ಟ್ ಇರಲಿವೆ, ಡ್ರೋನ್​ ಮೂಲಕ ಕಣ್ಗಾವಲು ಇರಿಸಲಾಗುವುದು. 24 ಗಂಟೆಗಳ ಕಂಟ್ರೋಲ್ ರೂಂಗಳು ಕರ್ತವ್ಯ ನಿರ್ವಹಿಸಲಿವೆ. ಸಿಆರ್​ಪಿಎಫ್ ತುಕಡಿಗಳನ್ನು ನಿಯೋಜನೆ ಮಾಡಲಾಗುವುದು. ರೌಡಿಶೀಟರ್​ಗಳ ಮೇಲೂ ತೀವ್ರ ನಿಗಾ ಇಡಲಾಗುವುದು. ಅಂತರಾಷ್ಟ್ರೀಯ ಗಡಿಯಲ್ಲೂ ಡ್ರೋಣ್ ಮೂಲಕ ಕಣ್ಗಾವಲು ಇರಿಸಲಾಗುವುದು ಎಂದರು.

ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗಳು ಇದ್ದರೆ ಮಾಹಿತಿ ನೀಡಿ, ಸ್ಥಳಿಯ ಪತ್ರಿಕೆಗಳು ಮತ್ತು ಟಿವಿಗಳಲ್ಲಿ ಮಾಹಿತಿ ನೀಡಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು. 11 ರಾಜ್ಯಗಳ ಚುನಾವಣೆಯಲ್ಲಿ 3400 ಕೋಟಿ ರೂ. ಸೀಜ್ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದರೆ ಜಾಮೀನು ರಹಿತ ಕೇಸ್ ದಾಖಲಿಸಲಾಗುವುದು ಎಂದರು.

ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಗಳ ಮೇಲೂ ನಿಗಾ ಇಡಲಾಗುವುದು. ಅಭ್ಯರ್ಥಿಗಳ ಬಗ್ಗೆ ಮಾತನಾಡಲು ಅವಕಾಶವಿದೆ. ಆದರೆ ಸುಳ್ಳು ಸುದ್ದಿಗಳ ಮೂಲಕ ತೆಗಳಲು ಅವಕಾಶವಿಲ್ಲ ಎಂದರು.

ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಮಾಹಿತಿ ನೀಡಬೇಕು. ಎಲ್ಲ ಬ್ಯಾಂಕ್​ಗಳು ದೈನಂದಿನ ವರದಿಗಳನ್ನು ಕಳುಹಿಸಬೇಕು ಎಂದರು.

ವಿಭಜಿಸಲು ಪ್ರೇರೇಪಿಸುವ ರಾಜಕೀಯ ಭಾಷಣ ಮಾಡುವಂತಿಲ್ಲ ಎಂದು ರಾಜಕೀಯ ಪಕ್ಷಗಳಿಗೆ ಸಲಹೆ ನೀಡಲಾಗಿದೆ. ವಿಷಯ ಆಧಾರಿತ ಪ್ರಚಾರ ಮಾಡಬೇಕು. ದ್ವೇಷದ ಭಾಷಣಗಳಿಗೆ ಅವಕಾಶವಿಲ್ಲ. ಯಾವುದೇ ಜಾತಿ ಅಥವಾ ಧಾರ್ಮಿಕ ವಿಷಯದ ಮೂಲಕ ಮತಯಾಚನೆ ಮಾಡುವಂತಿಲ್ಲ. ಖಾಸಗಿ ಜೀವನದ ಯಾವುದೇ ಅಂಶವನ್ನು ಟೀಕಿಸುವುದಿಲ್ಲ. ಪರಿಶೀಲಿಸದ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕಟಿಸಬಾರದು. ಜಾಹೀರಾತುಗಳನ್ನು ಸುದ್ದಿಯಾಗಿ ನೀಡುವಂತಿಲ್ಲ. ಪ್ರತಿಸ್ಪರ್ಧಿಗಳನ್ನು ನಿಂದಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೇಲೆ ನಿರ್ಬಂಧ ಹೇರಲಾಗುವುದು. ಸ್ಟಾರ್ ಪ್ರಚಾರಕರು ಪ್ರಚಾರದ ಗೌರವ ಕಾಪಾಡಿಕೊಳ್ಳಬೇಕು ಎಂದರು.

ಪ್ರಚಾರದ ವೇಳೆ ಅಭ್ಯರ್ಥಿಗಳು ಗೌರವ ಕಾಪಾಡಿಕೊಳ್ಳಬೇಕು. ದ್ವೇಷ ಭಾಷಣ ಮಾಡಬಾರದು. ಚುನಾವಣೆಯ ಶತ್ರುಗಳು ಮುಂದೆ ಸ್ನೇಹಿತರಾಗಬಹದು. ಅದಕ್ಕೆ‌ ಉದಾಹರಣೆ ಇದೆ ಎಂದರು.

ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋಷಿಸಿದ್ದಾರೆ.
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ಉತ್ತರ ಕರ್ನಾಟಕ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.





























































































error: Content is protected !!
Scroll to Top