ಕಲ್ಬುರಗಿ : ಲೋಕಸಭೆ ಚುನಾವಣೆ 2024 ಕಾವು ಜೋರಾಗಿದೆ. ಭಾರತದ ಚುನಾವಣಾ ಆಯೋಗವು ಪತ್ರಿಕಾಗೋಷ್ಠಿ ನಡೆಸುತ್ತಿದ್ದು, ಕೆಲವೇ ನಿಮಿಷಗಳಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಆಗಮಿಸಿದ್ದಾರೆ.
ಕಲಬುರಗಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕಲ್ಯಾಣ ಕರ್ನಾಟಕದಿಂದ ಮೋದಿ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಾರೆ. ರಾಜ್ಯಕ್ಕೆ ಮೋದಿ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಹೆಚ್ಚು ಆಸಕ್ತಿಯನ್ನು ಮೋದಿ ಕೊಟ್ಟಿದ್ದಾರೆ. ಈ ಬಾರಿ 28 ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಎಂದರು. ಅಲ್ಲದೆ, ಕಾಂಗ್ರೆಸ್ ಮುಳುಗುತ್ತಿರುವ ಹಡಗು. 28 ಕ್ಷೇತ್ರದಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನಾದರೂ ಗೆಲ್ಲಲಿ ನೋಡೋಣ ಎಂದು ಸವಾಲು ಹಾಕಿದರು. ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ಯಾವುದೋ ಕಾರಣದಿಂದ ವಿಧಾನಸಭೆಯಲ್ಲಿ ಹಿನ್ನಡೆಯಾಗಿರಬಹುದು ಅಷ್ಟೇ ಎಂದರು.
ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ, ವಿಧಾನಸೌಧಧಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಕಾಂಗ್ರೆಸ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದೇಶದ ಭದ್ರತೆಗಾಗಿ, ಪಾಕಿಸ್ತಾನ ಘೋಷಣೆ ಕೂಗಿದವರ ಹೆಡೆಮುರಿ ಕಟ್ಟಲು ಸಿಂಹದ ರೀತಿ ಘರ್ಜನೆ ಮಾಡಿದವರು ನರೇಂದ್ರ ಮೋದಿ. ಕಾಂಗ್ರೆಸ್ನಲ್ಲಿ ಯಾವುದೇ ಅಭ್ಯರ್ಥಿಗಳು ನಿಲ್ಲಲು ರೆಡಿ ಇಲ್ಲ. ಯುದ್ಧಕ್ಕೆ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದಾರೆ. ಮೋದಿಯಿಂದ ಮಾತ್ರ ಈ ದೇಶ ರಕ್ಷಣೆ ಮಾಡಲು ಸಾಧ್ಯ. ಒಂದೇ ಒಂದು ಕಾಳು ಅಕ್ಕಿಯನ್ನೂ ಸಿದ್ದರಾಮಯ್ಯ ಕೊಟ್ಟಿಲ್ಲ, ಅದನ್ನು ಕೊಟ್ಟಿದ್ದು ನರೇಂದ್ರ ಮೋದಿ ಎಂದರು.

ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪೇಠ ತೊಡಿಸಿದರು. ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿಗೆ ಕಂಬಳಿ ಶಾಲು ಹಾಕಿದರು. ಭಗವಂತ ಖೂಬಾ ಮತ್ತು ಸಂಸದ ಉಮೇಶ್ ಜಾಧವ್ ಅವರು ಮೋದಿ ಅವರಿಗೆ ಹಾರ ಹಾಕಿ ಸನ್ಮಾನಿಸಿದರು. ಇದೇ ವೇಳೆ ಮಹಿಳೆಯರು ಬಸವಣ್ಣನ ಫೋಟೋ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯಲ್ಲಿ ಎನ್ ವಿ ಗ್ರೌಂಡ್ನಲ್ಲಿ ನಡೆಯುತ್ತಿರುವ ಬಿಜೆಪಿ ಸಂಕಲ್ಪ ಸಮಾವೇಶದ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಅವರು, ದಾಖಲೆಯ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಸಂಕಲ್ಪ ಮಾಡಿದ್ದಾಗಿ ಹೇಳಿದರು. ಅಲ್ಲದೆ, ನಾನು ಹೆಲಿಪ್ಯಾಡ್ನಿಂದ ಬರುವಾಗ ರಸ್ತೆಯಲ್ಲಿ ನೋಡಿದೆ. ಜನರ ಉತ್ಸಾಹ ನೋಡಿ ನನಗೆ ಬಹಳ ಸಂತಸವಾಯಿತು ಎಂದು ಹೇಳಿದ ಅವರು ಮತ್ತೊಮ್ಮೆ ಬಿಜೆಪಿ ಸರಕಾರ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿದ ಪ್ರಧಾನಿ ಮೋದಿ, ಸರ್ಕಾರದ ಬಳಿ ಹಣವೇ ಇಲ್ಲ ಎಂದು ಮೋದಿ ಲೇವಡಿ ಮಾಡಿದರು. ನೀವು ಕರ್ನಾಟಕವನ್ನ ಬಲಪಡಿಸಲು ಇಚ್ಛಿಸುತ್ತೀರಾ? ಹಾಗದರೆ ಬಿಜೆಪಿಯನ್ನು ಬೆಂಬಲಿಸಿ. ನಿಮ್ಮ ಕನಸು ಈಡೇರಿಸಿಕೊಳ್ಳಬೇಕಾದರೆ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು. ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಜನರ ಮನಸ್ಸಿನಲ್ಲಿ ಭರವಸೆಯೇ ಇಲ್ಲದಂತಾಗಿದೆ. ಚುನಾವಣೆಗೂ ಮೊದಲು ಫ್ರೀ ಕರೆಂಟ್ ಎಂದು ಹೇಳಿದರು. ಈಗ ನೋಡಿದ್ರೆ ಕರೆಂಟ್ ಕೂಡ ಇಲ್ಲ ಏನೂ ಇಲ್ಲ. ಚುನಾವಣೆ ಬಳಿಕ ನಿಮ್ಮ ಜೇಬಿಗೆ ಕೈಹಾಕಿದರು ಎಂದು ಹೇಳುವ ಮೂಲಕ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು. ಅಲ್ಲದೆ, ರೈತರಿಗೆ ಈ ಸರ್ಕಾರ ಮೋಸ ಮಾಡಿದೆ ಎಂದರು.
ನಾನು 2 ದಿನಗಳಲ್ಲಿ 4 ದಕ್ಷಿಣ ರಾಜ್ಯಗಳಿಗೆ ಭೇಟಿ ನೀಡಿದೆ. ದಕ್ಷಿಣ ಭಾರತ ರಾಜ್ಯಗಳಲ್ಲಿ ಬಿಜೆಪಿ ಬಗ್ಗೆ ಉತ್ಸುಕತರಾಗಿದ್ದಾರೆ. ಜನರ ಉತ್ಸಾಹ ನೋಡಿ ನನಗೆ ಬಹಳ ಆನಂದವಾಯಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಬಗ್ಗೆ ಜನ ಆಕ್ರೋಶಗೊಂಡಿದ್ದಾರೆ ಎಂದು ಹೇಳುವ ಮೂಲಕ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರ ಇಷ್ಟು ಬೇಗ ಜನರ ಆಕ್ರೋಶಕ್ಕೆ ಗುರಿಯಾಗಿದೆ ಎಂದರು.







































