ಉಡುಪಿ – ಚಿಕ್ಕಮಗಳೂರಿನಲ್ಲಿ ಸಮಬಲದ ಹೋರಾಟಕ್ಕೆ ವೇದಿಕೆ ಸಿದ್ಧ

ಕೋಟಗೆ ಟಿಕೆಟ್‌ ನೀಡುವ ಮೂಲಕ ಲೆಕ್ಕಾಚಾರ ಬದಲಾಯಿಸಿದ ಬಿಜೆಪಿ

ಕಾರ್ಕಳ : ಭಾರತೀಯ ಜನತಾ ಪಕ್ಷ ಕಳೆದ ವಿಧಾನಸಭೆಯಲ್ಲಿ ಮಾಡಿದಂಥ ಕೆಲವು ಪ್ರಯೋಗಗಳನ್ನು ಲೋಕಸಭೆ ಚುನಾವಣೆಯಲ್ಲೂ ಮುಂದುವರಿಸಿದೆ. ಬಿಜೆಪಿ ಎರಡನೇ ಪಟ್ಟಿಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳ ಅಭ್ಯರ್ಥಿಗಳನ್ನು ಮಾ. 14ರಂದು ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕದ ಮಟ್ಟಿಗೆ ಕೆಲವು ಅಚ್ಚರಿಗಳಿವೆ. ಈ ಪೈಕಿ ಬಹಳ ಕುತೂಹಲ ಮೂಡಿಸಿರುವುದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ.
ಈ ಕ್ಷೇತ್ರದಲ್ಲಿ ಹಾಲಿ ಸಂಸದೆ, ಕೇಂದ್ರದಲ್ಲಿ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆಗೆ ಮರಳಿ ಟಿಕೆಟ್‌ ನೀಡುವುದಕ್ಕೆ ಬಹಳ ವಿರೋಧವಿತ್ತು. ಆದರೆ, ಹೈಕಮಾಂಡ್‌ ಅವರಿಗೇ ಟಿಕೆಟ್‌ ನೀಡಬಹುದು ಎಂಬ ನಿರೀಕ್ಷೆಯೂ ಇತ್ತು. 2-3 ದಿನಗಳಿಂದ ಕೋಟ ಶ್ರೀನಿವಾಸ ಪೂಜಾರಿ ಸೇರಿ ಕೆಲವರ ಹೆಸರುಗಳು ಪ್ರಸ್ತಾವದಲ್ಲಿದ್ದರೂ ಕೊನೆಗೆ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅದೃಷ್ಟ ಒಲಿದಿದೆ. ಹೀಗಾಗಿ ಉಡುಪಿ-ಚಿಕ್ಕಮಗಳೂರು ಕೂಡ ಈ ಸಲ ಕುತೂಹಲದ ಕ್ಷೇತ್ರಗಳ ಪಾಲಿಗೆ ಸೇರಿದೆ.
ಹಿರಿಯ ನಾಯಕ, ಅನುಭವಿ, ಪಂಚಾಯತ್‌ ಹಂತದಿಂದ ಸಚಿವ ಸ್ಥಾನದ ತನಕ ಬೆಳೆದಿರುವ, ಸರಳ, ಪ್ರಾಮಾಣಿಕ, ವಾಕ್ಪಟು, ಕೆಲಸಗಾರ ಎಂಬೆಲ್ಲ ಹಿರಿಮೆಗಳು ಕೋಟ ಶ್ರೀನಿವಾಸ ಪೂಜಾರಿಯವರಿಗೆ ಇವೆ. ತೀರಾ ಬಡಕುಟುಂಬದಿಂದ ಬಂದ ಕೋಟ ಪಕ್ಷದಲ್ಲಿ ಹಂತ ಹಂತವಾಗಿ ಮೇಲೇರಿದವರು. ಅಚಲ ಪಕ್ಷ ನಿಷ್ಠೆ ಮತ್ತು ಆರ್‌ಎಸ್‌ಎಸ್‌ ಮೇಲೆ ಇರುವ ಬದ್ಧತೆ ಅವರನ್ನು ಈ ಹಂತದವರೆಗೆ ಕೈ ಹಿಡಿದು ನಡೆಸಿ ತಂದಿದೆ ಎನ್ನುವುದು ನಿರ್ವಿವಾದ.
ಆದರೆ ಲೋಕಸಭೆ ಚುನಾವಣೆಗೆ ಪಕ್ಷ ಕೋಟ ಶ್ರೀನಿವಾಸ ಪೂಜಾರಿಯವರನ್ನು ಏಕೆ ಆರಿಸಿತು ಎನ್ನುವುದು ಕುತೂಹಲಕರ ಅಂಶ. ಈ ಬಗ್ಗೆ ಕೆದಕಿದರೆ ಇದರ ಹಿಂದೆ ಕರಾವಳಿಯ ಹಿಂದುತ್ವ, ಜಾತಿ ರಾಜಕೀಯ, ಸ್ಥಳೀಯ ಅಭ್ಯರ್ಥಿ ಇತ್ಯಾದಿ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಕೋಟ ಶ್ರೀನಿವಾಸ ಪೂಜಾರಿ ಒಬಿಸಿಯಲ್ಲಿ ಬರುವ ಬಿಲ್ಲವ ಸಮುದಾಯಕ್ಕೆ ಸೇರಿದವರು.
ಆದರೆ ಆರಂಭದಲ್ಲಿ ಕೋಟ ಹೆಸರು ಪ್ರಸ್ತಾವದಲ್ಲೇ ಇರಲಿಲ್ಲ. ಬಿಜೆಪಿಯ ಎಲ್ಲ ಲೆಕ್ಕಾಚಾರ ಬದಲಾದದ್ದು ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಜಯ ಪ್ರಕಾಶ್‌ ಹೆಗ್ಡೆಯವರನ್ನು ಕಾಂಗ್ರೆಸ್‌ ಪಕ್ಷ ಬಿಜೆಯಿಂದ ಸೆಳೆದುಕೊಂಡಾಗ. ಉಡುಪಿಯಲ್ಲಿ ಮಾಜಿ ಸಚಿವ, ಮಾಜಿ ಸಂಸದ ವಿನಯ್‌ ಕುಮಾರ್‌ ಸೊರಕೆ ಮಾತ್ರ ಪಕ್ಷದ ಪಾಳಯದಲ್ಲಿ ಎದ್ದು ಕಾಣುತ್ತಿದ್ದ ಹೆಸರು. ಜಯ ಪ್ರಕಾಶ್‌ ಹೆಗ್ಡೆಯವರಿಗೆ ಕಾಂಗ್ರೆಸ್‌ ಅನಿವಾರ್ಯವಾಗಿತ್ತು ಎನ್ನುವುದಕ್ಕಿಂತ ಕಾಂಗ್ರೆಸ್‌ಗೆ ಜಯ ಪ್ರಕಾಶ್‌ ಹೆಗ್ಡೆ ಬೇಕಾಗಿತ್ತು ಎಂದು ಹೇಳಬಹುದು.

ಜಯಪ್ರಕಾಶ್‌ ಹೆಗ್ಡೆಯವರನ್ನು ಮತ್ತೊಮ್ಮೆ ಪಕ್ಷಾಂತರ ಮಾಡಿಸಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಮಾಡಲು ಯಾವಾಗ ಕಾಂಗ್ರೆಸ್‌ ಮುಂದಾಯಿತೋ ಆಗಲೇ ಬಿಜೆಪಿ ತನ್ನ ರಣತಂತ್ರವನ್ನು ಕೂಡ ಬದಲಿಸಿತು. ಜಯ ಪ್ರಕಾಶ್‌ ಹೆಗ್ಡೆಯವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಸ್ಥಳೀಯ ಅಭ್ಯರ್ಥಿ ಎಂಬ ಅಂಶಕ್ಕೆ ಹೆಚ್ಚು ಒತ್ತು ಕೊಡುತ್ತಿತ್ತು. ಜತೆಗೆ ಬಂಟ ಸಮುದಾಯದವರು ಎಂಬ ಅಂಶ ಮುಖ್ಯವಾಗುತ್ತಿತ್ತು. ಬಂಟರ ಒಂದಷ್ಟು ಮತಗಳನ್ನು ಸೆಳೆಯುವ ಸಾಮರ್ಥ್ಯ ಜಯಪ್ರಕಾಶ್‌ ಹೆಗ್ಡೆಯವರಿಗೆ ಇದೆ. ಇದರೊಂದಿಗೆ ಪ್ರಾಮಾಣಿಕ, ಕೆಲಸಗಾರ, ಸರಳ ಮತ್ತಿತರ ಅಂಶಗಳು ಕಾಂಗ್ರೆಸ್‌ ಪಾಲಿಗೆ ಪ್ಲಸ್‌ ಪಾಯಿಂಟ್‌ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇದೇ ಲೆಕ್ಕಾಚಾರವನ್ನೂ ಬಿಜೆಪಿಯೂ ಹಾಕಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಈ ಮೂಲಕ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಮಬಲದ ಹೋರಾಟಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ. ಯಾರಿಗೆ ಸಂಸತ್‌ ಪ್ರವೇಶಿಸುವ ಅದೃಷ್ಟ ಇದೆ ಎನ್ನುವುದನ್ನು ಮಾತ್ರ ಮತದಾರ ತೀರ್ಮಾನಿಸುತ್ತಾನೆ.

ದ.ಕ.ದಲ್ಲಿ ಬಿಜೆಪಿಯಿಂದ ಕ್ಯಾ. ಬೃಜೇಶ್‌ ಚೌಟ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿರುವುದರಿಂದ ಅವರ ವಿರುದ್ಧ ಬಿಲ್ಲವ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಜನೆ ಕಾಂಗ್ರೆಸ್‌ಗೆ ಇರಬಹುದು. ಹಾಗಾದಲ್ಲಿ ವಿನಯ್‌ ಕುಮಾರ್‌ ಸೊರಕೆ ಅಥವಾ ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್‌ ಅವರಿಗೆ ಟಿಕೆಟ್‌ ಒಲಿಯುವ ಸಾಧ್ಯತೆಯೇ ಅಧಿಕ. ಉಳಿದಂತೆ ಬೆಂಗಳೂರು ಉತ್ತರದಲ್ಲಿ ಕರಾವಳಿ ಮೂಲದ ಹಿರಿಯ ಮುಖಂಡ ಡಿ.ವಿ. ಸದಾನಂದ ಗೌಡರಿಗೆ ಟಿಕೆಟ್‌ ತಪ್ಪಿದೆ. ಅವರ ಕ್ಷೇತ್ರಕ್ಕೆ ಅವರದೇ ಊರಿನ, ಅವರದೇ ಸಮುದಾಯದ ಶೋಭಾ ಕರಂದ್ಲಾಜೆ ಟಿಕೆಟ್ ಗಿಟ್ಟಿಸಿಕೊಂಡಿರುತ್ತಾರೆ.







































































































error: Content is protected !!
Scroll to Top