ಬಿಎಸ್ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ
ಶಿವಮೊಗ್ಗ: ಬಿಜೆಪಿ ಎರಡನೇ ಪಟ್ಟಿ ಪ್ರಕಟವಾದ ಬಳಿಕ ಅತಿ ಹೆಚ್ಚು ನಿರಾಶೆಗೊಳಗಾದವರು ಮಾಜಿ ಸಚಿವ ಈಶ್ವರಪ್ಪ. ಪುತ್ರ ಕಾಂತೇಶ್ಗೆ ಹಾವೇರಿ-ಗದಗ ಟಿಕೆಟ್ ಕೊಡಿಸಲು ಇನ್ನಿಲ್ಲದ ಪ್ರಯತ್ನಪಟ್ಟಿದ್ದ ಈಶ್ವರಪ್ಪಗೆ ತೀವ್ರ ಮುಖಭಂಗವಾಗಿದೆ. ಈ ಕ್ಷೇತ್ರದ ಟಿಕೆಟ್ ಹಾಲಿ ಶಾಸಕ, ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಪಾಲಾಗಿದೆ. ಇದರಿಂದ ಬಿಜೆಪಿಯಲ್ಲಿ ಇನ್ನು ತನ್ನ ಮಗನಿಗೂ ಭವಿಷ್ಯವಿಲ್ಲ ಎಂಬ ಅಂಶ ಈಶ್ವರಪ್ಪನವರಿಗೆ ಮನದಟ್ಟಾಗಿದೆ. ಹೀಗಾಗಿ ಟಿಕೆಟ್ ತಪ್ಪಿಸಿದ ಯಡಿಯೂರಪ್ಪ ಪರಿವಾರದ ವಿರುದ್ಧ ಅವರು ಕೊತ ಕೊತ ಕುದಿಯುತ್ತಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲ್ಪಟ್ಟಾಗಲೇ ಸಿಟ್ಟುಗೊಂಡಿದ್ದ ಈಶ್ವರಪ್ಪ ಕೊನೆಗೆ ಸ್ವತಃ ಮೋದಿ ಫೋನ್ ಮಾಡಿ ಮಾತನಾಡಿದ ಬಳಿಕ ತಣ್ಣಗಾಗಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ವರಿಷ್ಠರು ಮುಂದೆ ಮಗನಿಗೆ ರಾಜಕೀಯ ಭವಿಷ್ಯ ಕಲ್ಪಿಸಿಕೊಡುವ ಬಗ್ಗೆ ಮಾತನ್ನಾಡಿದ್ದರು. ಈ ಮಾತನ್ನು ನಂಬಿ ಈಶ್ವರಪ್ಪ ಲೋಕಸಭೆ ಚುನಾವಣೆಯಲ್ಲಿ ಮಗನಿಗೊಂದು ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿದ್ದರು. ಆದರೆಅವರಿಗೇ ಇದ್ದದ್ದು ಎರಡೇ ಕ್ಷೇತ್ರ. ಒಂದು ಶಿವಮೊಗ್ಗ ಇನ್ನೊಂದು ಹಾವೇರಿ-ಗದಗ.
ಈ ಪೈಕಿ ಬೈಂದೂರಿನ ಒಂದು ಭಾಗವನ್ನೂ ಒಳಗೊಂಡಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರೇ ಹಾಲಿ ಸಂಸದ. ಅವರು ಈ ಕ್ಷೇತ್ರವನ್ನು ಬಿಟ್ಟುಕೊಡುವ ಸಾಧ್ಯತೆ ಸುತರಾಂ ಇಲ್ಲ. ಪಕ್ಷ ಅವರಿಗೆ ಮರಳಿ ಟಿಕೆಟ್ ನೀಡಿದೆ. ಇನ್ನುಳಿದದ್ದು ಹಾವೇರಿ-ಗದಗ ಮಾತ್ರ. ಶಿವಮೊಗ್ಗ ಯಾವ ಕಾರಣಕ್ಕೂ ಸಿಗುವುದಿಲ್ಲ ಎಂದು ಗೊತ್ತಿದ್ದ ಈಶ್ವರಪ್ಪ ಹಾವೇರಿ-ಗದಗದ ಮೇಲೆಯೇ ಹೆಚ್ಚು ಗಮನ ಹರಿಸಿದ್ದರು. ಆದರೆ ಇಲ್ಲಿ ಬಿಜೆಪಿ ಶಾಸಕರಾಗಿರುವ ಬೊಮ್ಮಾಯಿಯವರಿಗೆ ಟಿಕೆಟ್ ನೀಡಿರುವುದು ಈಶ್ವರಪ್ಪನವರನ್ನು ಕೆರಳಿ ಕೆಂಡವಾಗಿಸಿದೆ. ಬೊಮ್ಮಾಯಿ ಹೊರಗಿನಿಂಡ ಬಂದವರು. ಅವರಿಗೆ ಮುಖ್ಯಮಂತ್ರಿ ಪಟ್ಟಕಟ್ಟಿ ಆಗಿದೆ. ಅವರ ನೇತೃತ್ವದಲ್ಲಿ ಪಕ್ಷ ಹೀನಾಯವಾಗಿ ಸೋತು ಹೋಗಿದೆ. ಇಷ್ಟಾದರೂ ಮರಳಿ ಅವರಿಗೇ ಮಣೆ ಹಾಕುವ ಅಗತ್ಯ ಏನಿತ್ತು ಎನ್ನುವುದು ಈಶ್ವರಪ್ಪ ರೋಶಕ್ಕೆ ಕಾರಣ.
ಮಗನಿಗೆ ಯಡಿಯೂರಪ್ಪ ಟಿಕೆಟ್ ಕೊಡಿಸಿಲ್ಲ ಎಂದು ಈಶ್ವರಪ್ಪ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಈಶ್ವರಪ್ಪ ಮತ್ತು ಬಿಎಸ್ವೈ ನಡುವೆ ಮತ್ತೆ ಶೀತಲಸಮರ ಶುರುವಾಗಿದ್ದು, ಈಶ್ವರಪ್ಪ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ.
ಕಾಂತೇಶ್ಗೆ ಟಿಕೆಟ್ ಇಲ್ಲ ಎಂದು ಅರಿವಾದಾಗ ಈಶ್ವರಪ್ಪ ಪತ್ನಿ ಮತ್ತು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಟಿಕೆಟ್ ಘೋಷಣೆಯಾದ ಬಳಿಕ ಈಶ್ವರಪ್ಪ ಸುಮಾರು ಒಂದು ತಾಸು ತಮ್ಮ ಆಪ್ತರ ಜೊತೆ ಅಜ್ಞಾತ ಸ್ಥಳದಲ್ಲಿ ಮೀಟಿಂಗ್ ಮಾಡಿದ್ದಾರೆ.
ಬಿಎಸ್ವೈ ನನಗೆ ಮತ್ತು ನನ್ನ ಪುತ್ರನಿಗೆ ಟಿಕೆಟ್ ಕೊಡಿಸುವುದಾಗಿ ಮತ್ತು ಆತನ ಪರ ಪ್ರಚಾರ ಮಾಡಿ ಗೆಲ್ಲಿಸುವುದಾಗಿ ಮಾತುಕೊಟ್ಟಿದ್ದರು. ಈಗ ಅವರು ಮೋಸ ಮಾಡಿದ್ದಾರೆ. ಶೋಭಾ ಮತ್ತು ಬಸವರಾಜ್ಗೆ ಪಟ್ಟುಹಿಡಿದು ಟಿಕೆಟ್ ಕೊಡಿಸಿದ ಬಿಎಸ್ವೈ ತಮ್ಮ ಮಗ ಕಾಂತೇಶ್ಗೆ ಯಾಕೆ ಟಿಕೆಟ್ ಕೊಟ್ಟಿಲ್ಲವೆಂದು ಈಶ್ವರಪ್ಪ ಅಲವತ್ತುಕೊಂಡಿದ್ದಾರೆ.
ನಾಳೆ ಈಶ್ವರಪ್ಪ ತನ್ನ ಬೆಂಬಲಿಗರ ಸಭೆ ಕರೆದಿದ್ದು, ಇಲ್ಲಿ ಮುಂದಿನ ನಡೆ ತೀರ್ಮಾನವಾಗಲಿದೆ. ಬಹುತೇಕ ಈಶ್ವರಪ್ಪ ಶಿವಮೊಗ್ಗದಿಂದ ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಎಲ್ಲರನ್ನೂ ಎದುರುಹಾಕಿಕೊಂಡು ಇಂಥ ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಈಶ್ವರಪ್ಪ ತಯಾರಿದ್ದಾರೆಯೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.






























































