ಕಾಲಿನ ಮೇಲೆ ಚಲಿಸಿದ ಕಾರು : ಗಂಭೀರ ಗಾಯ

ಕಾರ್ಕಳ : ವೇಗವಾಗಿ ಹೋಗುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಕಸಬಾ ಗ್ರಾಮದ ಮ್ಯಾಡಿಸ್‌ ಕಟ್ಟಿ ಕೆಫೆ ಸಮೀಪ ರಸ್ತೆ ಬದಿ ಮಲಗಿದ್ದ ಗಣೇಶ ಎಂಬವರ ಕಾಲುಗಳ ಮೇಲೆ ಚಲಿಸಿದ ಪರಿಣಾಮ ಗಣೇಶ ಅವರ ಎರಡೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಮಾ.9ರ ರಾತ್ರಿ 11.45ರ ವೇಳೆಗೆ ಘಟನೆ ಸಂಭವಿಸಿದ್ದು, ಪೆರ್ವಾಜೆ ಕಸಬಾದ ರಾಮನಾಥ ಎಂಬವರು ನೀಡಿದ ದೂರಿನ ಪ್ರಕಾರ ನಗರ ಪೊಲೀಸ್‌ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.


ಲಾರಿ ಪಲ್ಟಿಯಾಗಿ ಡ್ರೈವರ್‌, ಕ್ಲೀನರ್‌ಗೆ ಗಾಯ

ಕಾರ್ಕಳ : ನಲ್ಲೂರು ಗ್ರಾಮದ ನಲ್ಲೂರು ಕ್ರಾಸ್‌ ಬಳಿ ಬಜಗೋಳಿ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಮಾ. 9ರ ರಾತ್ರಿ ಲಾರಿ ಪಲ್ಟಿಯಾಗಿ ಚಾಲಕ ಮಂಜುನಾಥ ಮತ್ತು ಕ್ಲೀನರ್‌ ಗುಲಾಬ್‌ ಸಿಂಗ್‌ ಎಂಬವರು ಗಾಯಗೊಂಡಿದ್ದಾರೆ. ಲಾರಿ ಜಖಂಗೊಂಡಿದೆ. ನಲ್ಲೂರಿನ ಜಿಜೋ ಥಾಮಸ್‌ ಎಂಬವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಸ್ಕೂಟಿ ಡಿಕ್ಕಿ : ಸವಾರನಿಗೆ ಗಾಯ

ಕಾರ್ಕಳ : ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರದಲ್ಲಿ ಮಾ. 10ರಂದು ಸಂಜೆ ಕಸಬಾ ಗ್ರಾಮದ ಪ್ರಸಾದ್‌ ಎಂಬವರ ಕಾರಿಗೆ ಸ್ಕೂಟಿ ಡಿಕ್ಕಿ ಹೊಡೆದು ಸವಾರ ಗಾಯಗೊಂಡಿದ್ದಾರೆ. ಬಾರ್‌ ಕಡೆಯಿಂದ ವೇಗವಾಗಿ ಬಂದ ಸ್ಕೂಟಿ ಕಾರಿಗೆ ಡಿಕ್ಕಿ ಹೊಡೆದು ಸವಾರ ಉದಯ ಎಂಬವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಪ್ರಸಾದ್‌ ಕೂಡಲೇ ಅವರನ್ನು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎರಡೂ ವಾಹನಗಳು ಜಖಂ ಆಗಿವೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ : ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ : ಸಾಲದ ಹೊರೆಯಿಂದ ಮನನೊಂದು ವ್ಯಕ್ತಿಯೊಬ್ಬರು ನೇಣುಹಾಕಿಕೊಂಡು ಆತ್ನಹತ್ಯೆ ಮಾಡಿಕೊಂಡ ಘಟನೆ ಶಿವಪುರ ಗ್ರಾಮದಲ್ಲಿ ಮಾ.9 ರಂದು ಸಂಭವಿಸಿದೆ. ಶಿವಪುರದ ವಸಂತಿ ಎಂಬವರ ಸಹೋದರ ಸಂತೋಷ ಆತ್ಮಹತ್ಯೆ ಮಾಡಿಕೊಂಡವರು. ಗಾರೆ ಕೆಲಸ ಮಾಡುತ್ತಿದ್ದ ಸಂತೋಷ ಮದ್ಯಪಾನ ಚಟ ಹೊಂದಿದ್ದರು ಹಾಗೂ ವಿಪರೀತ ಸಾಲ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಶನಿವಾರ ಶಿವಪುರ ಕುಬ್ರಿ ದರ್ಖಾಸು ನಿವಾಸಿ ಚಂದ್ರಶೇಖರ ಎಂಬವರ ಮನೆ ಬಳಿ ಇರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಸಂತಿಯವರು ನೀಡಿದ ದೂರಿನ ಪ್ರಕಾರ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























































































































error: Content is protected !!
Scroll to Top