ಆಸ್ಕರ್ ಪ್ರಶಸ್ತಿ ಇತಿಹಾಸದಲ್ಲೇ ಅಚ್ಚರಿಯ ಘಟನೆ
ಲಾಸ್ ಏಂಜಲೀಸ್: : ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಎಂದರೆ ಅದೊಂದು ಬೇರೆಯೇ ರಂಗಿನ ಲೋಕ. ಪ್ರಶಸ್ತಿ ಪಡೆದವರು, ಪ್ರಶಸ್ತಿ ಕೊಡುವವರು ಇದಕ್ಕಾಗಿಯೇ ವಿಶೇಷ, ವಿಶಿಷ್ಟ ಉಡುಪುಗಳನ್ನು ಹೊಲಿಸಿಕೊಂಡು ಧರಿಸುತ್ತಾರೆ. ಇಂಥ ಉಡುಪುಗಳು ಲಕ್ಷಗಟ್ಟಲೆ ಬೆಲೆಬಾಳುತ್ತವೆ. ಯಾರು ಯಾವ ಉಡುಪು ಧರಿಸಿದ್ದರು, ಅದನ್ನು ವಿನ್ಯಾಸ ಮಾಡಿದವರು ಯಾರು ಎಂಬುದೆಲ್ಲ ಸಿನೆಮಾ ಮಾಧ್ಯಮಗಳಿಗೆ ರಸಗವಳದಂಥ ಸುದ್ದಿ. ಹೆಂಗಸರು ನೆಲದಲ್ಲಿ ಮೀಟರ್‌ಗಟ್ಟಲೆ ಎಳೆದುಕೊಂಡು ಹೋಗುವಂಥ ಗೌನ್ ಮತ್ತು ಪುರುಷರು ನೀಟಾಗಿ ಕೋಟು ಬೂಟು ಧರತಿಸಿಕೊಂಡು ಬರುವುದು ವಾಡಿಕೆ.
ಲಾಸ್ ಏಂಜಲೀಸ್‌ನಲ್ಲಿ ನಿನ್ನೆ ನಡೆದ ಓಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವೂ ಉಡುಪಿನ ಕಾರಣಕ್ಕೆ ಸುದ್ದಿಯಾಗಿದೆ. ಆದರೆ ಇದು ಉಡುಪು ಧರಿಸಿದ್ದಕ್ಕೆ ಅಲ್ಲ ಬದಲಾಗಿ ಧರಿಸದೆ ಇದ್ದದ್ದಕ್ಕಾಗಿ. ಹಾಲಿವುಡ್‌ನ ಜನಪ್ರಿಯ ನಟರೊಬ್ಬರು ಪ್ರಶಸ್ತಿ ನೀಡಲು ಸಂಪೂರ್ಣ ವಿವಸ್ತ್ರರಾಗಿ ಸ್ಟೇಜ್‌ಗೆ ಹೋಗಿದ್ದು, ಈ ವೀಡಿಯೋ ಈಗ ಜಗತ್ತಿನಾದ್ಯಂತ ವೈರಲ್ ಆಗಿದೆ.
96ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆಯುತ್ತಿದೆ. ಜಿಮ್ಮಿ ಕಿಮ್ಮೆಲ್ ಅವರು ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ. ವಿವಸ್ತ್ರರಾಗಿ ಪ್ರಶಸ್ತಿ ಪ್ರದಾನಿಸಿದ್ದು ಜನಪ್ರಿಯ ನಟ ಜಾನ್ ಸೀನಾ.
ಜಾನ್ ಸೀನಾ ಅವರು ಸಂಪೂರ್ಣ ಬೆತ್ತಲಾಗಿದ್ದರು. ಮರ್ಮಾಂಗಕ್ಕೆ ಮಾತ್ರ ಒಂದು ಪ್ಲೇಟ್ ರೀತಿಯ ವಸ್ತುವನ್ನು ಹಿಡಿದುಕೊಂಡಿದ್ದರು. ಅವರು ಈ ರೀತಿ ವೇದಿಕೆ ಏರಿದ್ದು ‘ಅತ್ಯುತ್ತಮ ಕಾಸ್ಟ್ಯೂಮ್ (ವಸ್ತ್ರಲಂಕಾರ) ಅವಾರ್ಡ್’ ನೀಡಲು. ಆ್ಯಂಕರ್ ಜಿಮ್ಮಿ ಕಿಮ್ಮೆಲ್ ಅವರು ಈ ರೀತಿ ಮಾಡುವಂತೆ ಜಾನ್ ಸೀನಾಗೆ ಸ್ಫೂರ್ತಿ ನೀಡಿದ್ದರು ಎನ್ನಲಾಗಿದೆ. ಸದ್ಯ ವೀಡಿಯೊ ವೈರಲ್ ಆಗುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಪೂರ್ ಥಿಂಗ್ಸ್’ ಸಿನಿಮಾಗೆ ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ಅವಾರ್ಡ್ ಸಿಕ್ಕಿದೆ.































































