ಬ್ರಹ್ಮಾವರದಲ್ಲಿ ನಡೆದ ಘಟನೆಯ ವೀಡಿಯೊ ವೈರಲ್
ಉಡುಪಿ: ಮನೆಗೆ ಬಂದ ಇಬ್ಬರು ಅಪರಿಚಿತ ಮಹಿಳೆಯರು ಮನೆಯಲ್ಲಿದ್ದ 1 ವರ್ಷದ ಮಗುವನ್ನು ಅಪಹರಿಸಲು ಯತ್ನಿಸಿದ ಘಟನೆ ಬ್ರಹ್ಮಾವರದ ಉಪ್ಪಿನಕೋಟೆಯಲ್ಲಿ ನಡೆದಿದೆ.
ಫೆ. 21ರಂದು ಬೆಳಗ್ಗೆ ಉಪ್ಪಿನಕೋಟೆಯ ಮಹಿಮಾ ಎಂಬವರ ಮನೆಗೆ ಬಂದ ಇಬ್ಬರು ಅಪರಿಚಿತ ಹೆಂಗಸರು ತಾವು ಮುಂಬಯಿಯಿಂದ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಮನೆಯವರ ವಿರೋಧದ ನಡುವೆಯೂ ಸೀದಾ ಮನೆಯೊಳಗೆ ಬಂದು ಮಹಿಮಾ ಅವರ 1 ವರ್ಷದ ಹೆಣ್ಣು ಮಗುವನ್ನು ಎತ್ತಿಕೊಂಡು ಮೊಬೈಲಿನಲ್ಲಿರುವ ವಿಡಿಯೋಗಳನ್ನು ತೋರಿಸುತ್ತಾ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಕೂಡಲೇ ಮಹಿಮಾ ಅವರು ಅಪರಿಚಿತ ಹೆಂಗಸು ಎತ್ತಿಕೊಂಡು ಹೋದ ಮಗುವನ್ನು ಕರೆದುಕೊಂಡು ಬಂದಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಮಹಿಮಾ ಅವರ ಅಣ್ಣ ಬಂದಿದ್ದನ್ನು ನೋಡಿದ ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದಾರೆ. ಮಹಿಳೆಯರಿಬ್ಬರು ಓಡಿಹೋಗುತ್ತಿರುವ ವೀಡಿಯೊ ಫೇಸ್‌ಬುಕ್ ಮತ್ತಿತರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಆರಂಭದಲ್ಲಿ ಇವರನ್ನು ಮತಾಂತರಕ್ಕೆ ಬಂದ ಮಹಿಳೆಯರು ಎಂದು ಭಾವಿಸಲಾಗಿತ್ತು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















































































