ಮುಂಬಯಿಗೆ ಹಗಲು ರೈಲು ಬೇಕೆನ್ನುವುದು ಕರಾವಳಿಗರ ಬಹುಕಾಲದ ಬೇಡಿಕೆ
ಮಂಗಳೂರು : ಮಡ್ಗಾಂವ್-ಮುಂಬಯಿ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ರೈಲನ್ನು ಮುಂಬಯಿ ತನಕ ವಿಸ್ತರಿಸುವ ಬೇಡಿಕೆಗೆ ಮತ್ತೆ ಬಲ ಬಂದಿದೆ. ಇತ್ತೀಚೆಗೆ ಶುರುವಾಗಿರುವ ಈ ರೈಲಿನಲ್ಲಿ ನಿರೀಕ್ಷಿಸಿದಷ್ಟು ಜನ ಪ್ರಯಾಣಿಸುತ್ತಿಲ್ಲ. ಹೀಗಾಗಿ ರೈಲು ರದ್ದಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ರೈಲನ್ನು ಮುಂಬಯಿಗೆ ವಿಸ್ತರಿಸಿದರೆ ಮತ್ತು ಹೆಚ್ಚು ನಿಲುಗಡೆ ಒದಗಿಸಿದರೆ ರೈಲು ತುಂಬಲಿದೆ ಎನ್ನಲಾಗುತ್ತಿದೆ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಈಗಾಗಲೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರೈಲನ್ನು ವಿಸ್ತರಿಸುವ ಬಗ್ಗೆ ಪತ್ರ ಬರೆದಿದ್ದಾರೆ.
ಪ್ರಸ್ತುತ ವಂದೇ ಭಾರತ್ ರೈಲು ಮಂಗಳೂರು ಮತ್ತು ಮಡ್ಗಾಂವ್ ಮಧ್ಯೆ ಉಡುಪಿ ಮಾತ್ರ ಕಾರವಾರದಲ್ಲಿ ನಿಲ್ಲುತ್ತದೆ. ಹೀಗಾಗಿ ಇದು ಜನರಿಗೆ ಯಾವ ರೀತಿಯಲ್ಲೂ ಉಪಯೋಗಕ್ಕೆ ಇಲ್ಲದಂತಾಗಿದೆ. ಕೊಲ್ಲೂರು ಮೂಕಾಂಬಿಕಾ ನಿಲ್ದಾಣ, ಕುಂದಾಪುರ ಸೇರಿ ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ನೀಡಿದರೆ ಕನಿಷ್ಠ ಪುಣ್ಯಕ್ಷೇತ್ರ ಸಂದರ್ಶಿಸುವವರಿಗಾದರೂ ಅನುಕೂಲ ಆದೀತು.
ರೈಲನ್ನು ಮುಂಬಯಿ ತನಕ ವಿಸ್ತರಿಸಿದರೆ ನಿತ್ಯ ಎಲ್ಲ ಸೀಟುಗಳು ಭರ್ತಿಯಾಗಲಿವೆ. ಕೊಂಕಣ ರೈಲ್ವೇ ಶುರುವಾಗಿ ಮೂರು ದಶಕವಾಗಿದ್ದರೂ ಇನ್ನೂ ಮಂಗಳೂರು ಮತ್ತು ಮುಂಬಯಿ ನಡುವೆ ಪೂರ್ಣ ಪ್ರಮಾಣದಲ್ಲಿ ಇರುವುದು ಎರಡು ರೈಲುಗಳು ಮಾತ್ರ. ಉಳಿದೆಲ್ಲ ರೈಲುಗಳು ಮಂಗಳೂರು ಮೂಲಕ ಹಾದು ಹೋಗುತ್ತವೆ. ಅಲ್ಲದೆ ಇನ್ನೂ ಮುಂಬಯಿ-ಮಂಗಳೂರು ನಡುವೆ ಹಗಲು ರೈಲು ಶುರುವಾಗಿಲ್ಲ. ಹಗಲು ರೈಲು ಬೇಕೆನ್ನುವುದು ಕರಾವಳಿ ಜನರ ಬಹುಕಾಲದ ಬೇಡಿಕೆ. ಹೀಗಾಗಿ ವಂದೇ ಭಾರತ್ ರೈಲನ್ನು ಮುಂಬಯಿಗೆ ವಿಸ್ತರಿಸಬೇಕೆಂದು ಒತ್ತಾಯಿಸಲಾಗುತ್ತಿದೆ.
ಪ್ರಸ್ತುತ ಮಂಗಳುರು-ಮುಂಬಯಿ ನಡುವೆ ಓಡಾಡುವ ಎಲ್ಲ ರೈಲುಗಳು ಎಲ್ಲ ಕಾಲದಲ್ಲೂ ಭರ್ತಿಯಾಗಿರುತ್ತವೆ. ಬೇಸಿಗೆ ರಜೆ ಮತ್ತು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಈ ರೈಲುಗಳಲ್ಲಿ ಸೀಟು ಸಿಗುವುದೇ ದುಸ್ತರ. ವೈಟಿಂಗ್ ಲಿಸ್ಟ್ ಮೈಲುದ್ದ ಇರುತ್ತದೆ. ಹೀಗಾಗಿ ವಂದೇ ಭಾರತ್ ರೈಲನ್ನು ಮುಂಬಯಿಗೆ ವಿಸ್ತರಿಸಬೇಕು ಹಾಗೂ 8 ಬೋಗಿ ಬದಲು 16 ಬೋಗಿ ಅಳವಡಿಸಬೇಕೆಂದು ಒತ್ತಾಯ ಜೋರಾಗಿ ಕೇಳಿಬರುತ್ತಿದೆ.
ಈ ನಡುವೆ ಈ ರೈಲನ್ನು ಕೇರಳದ ಕೋಝಿಕೋಡ್ಗೆ ವಿಸ್ತರಿಸಲು ತೆರೆಮರೆಯಲ್ಲಿ ಪ್ರಯತ್ನಗಳಾಗುತ್ತಿವೆ ಎನ್ನಲಾಗಿದೆ. ಪ್ರಸ್ತುತ ಪ್ರಯಾಣಿಕರ ಕೊರತೆಯಿರುವುದರಿಂದ ರೈಲನ್ನು ಕೋಝಿಕ್ಕೋಡ್ ತನಕ ವಿಸ್ತರಿಸುವ ಬೇಡಿಕೆಯೂ ಇದೆ.






























































