ಚಂಡೀಗಢ : ಚಂಡೀಗಢದಲ್ಲಿ ಕೇಂದ್ರ ಸಚಿವರು ಮತ್ತು ರೈತ ಮುಖಂಡರ ನಡುವೆ ಗುರುವಾರ ಸಂಜೆ ಸುಮಾರು 5 ಗಂಟೆಗಳ ಕಾಲ ಮಾತುಕತೆ ನಡೆದಿದ್ದು ಒಮ್ಮತ ಮೂಡಿಲ್ಲ. ಹಲವು ಅಂಶಗಳ ಬಗ್ಗೆ ಮಾತುಕತೆಗಳನ್ನು ಮುಂದಕ್ಕೆ ಕೊಂಡೊಯ್ಯುವ ಸೂಚನೆಗಳು ಕಂಡುಬಂದಿದ್ದು ಮಾತುಕತೆಗಳು ಸಕಾರಾತ್ಮಕವಾಗಿವೆ ಎಂದು ಹೇಳಲಾಗಿದೆ. ಫೆ. 18 ಭಾನುವಾರ ಮತ್ತೊಂದು ಸಭೆ ನಡೆಯಲಿದೆ. ಭಾನುವಾರದ ಸಭೆಯವರೆಗೂ ರೈತರು ಶಂಭು ಗಡಿಯಲ್ಲಿ ಮುಂದೆ ಹೋಗುವುದಿಲ್ಲ. ಅದೇ ಸಮಯದಲ್ಲಿ, ಹರಿಯಾಣ ಪೊಲೀಸರು ಮತ್ತು ಅರೆಸೇನಾ ಪಡೆ ಕೂಡ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ.
ರೈತರೊಂದಿಗೆ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಅರ್ಜುನ್ ಮುಂಡಾ ಮಾತನಾಡಿ, ಉತ್ತಮ ವಾತಾವರಣದಲ್ಲಿ ಸಕಾರಾತ್ಮಕ ಚರ್ಚೆ ನಡೆದಿದ್ದು, ರೈತ ಸಂಘಟನೆಗಳು ಗಮನ ಸೆಳೆದಿರುವ ವಿಚಾರಗಳನ್ನು ಪರಿಗಣಿಸಿ ಭಾನುವಾರ ಸಂಜೆ 6 ಗಂಟೆಗೆ ಚರ್ಚೆಯನ್ನು ಮುಂದುವರಿಸುತ್ತೇವೆ ಎಂದಿದ್ದಾರೆ. ಈ ಸಭೆಯಲ್ಲಿ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.






























































