ನಕ್ಸಲ್‌ ಶ್ರೀಮತಿಯನ್ನು ಕಾರ್ಕಳಕ್ಕೆ ಕರೆತಂದ ಪೊಲೀಸರು

ಕಾರ್ಕಳ : ಕೇರಳ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಕ್ಸಲ್‌ ನಾಯಕಿ ಶ್ರೀಮತಿ ಅಲಿಯಾಸ್‌ ಉಣ್ಣಿಮಾಯಾ(28) ಅವಳನ್ನು ವಿಚಾರಣೆಗಾಗಿ ಪೊಲೀಸರು ಕಾರ್ಕಳಕ್ಕೆ ಕರೆತಂದಿದ್ದಾರೆ. ಪೊಲೀಸರಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ನಕ್ಸಲ್ ನಾಯಕಿ ಮೂಲತಃ ಶೃಂಗೇರಿ ನಿವಾಸಿ ಶ್ರೀಮತಿ 2023ರ ನ. 7 ರಂದು ಕೇರಳ ಪೊಲೀಸರಿಗೆ ಸೆರೆಸಿಕ್ಕಿದ್ದಳು. ಅನಂತರ ಈಕೆ ಕೇರಳ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಳು. ಫೆ. 13ರಂದು ರಾತ್ರಿ ಕಾರ್ಕಳ ನಗರ ಠಾಣೆ ಪೊಲೀಸರು ಕೇರಳ ಜೈಲಿನಿಂದ ಬಿಗಿ ಭದ್ರತೆಯಲ್ಲಿ ಕರೆತಂದಿದ್ದಾರೆ. ಫೆ. 14ರಂದು ಆಕೆಯನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಫೆ. 17ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ಪ್ರಕರಣ
2011ರ ನ. 19ರಂದು ಹೆಬ್ರಿಯ ಕಬ್ಬಿನಾಲೆಯಲ್ಲಿ ನಡೆದ ಸದಾಶಿವ ಗೌಡ ಅವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದೆ. ಸದಾಶಿವ ಗೌಡ ಅವರನ್ನು ಶ್ರೀಮತಿಯನ್ನು ಒಳಗೊಂಡ ನಕ್ಸಲ್‌ ತಂಡ ಅಪಹರಿಸಿ ಗುಂಡು ಹಾರಿಸಿ ಕೊಲೆ ನಡೆಸಿತ್ತು. ಪೊಲೀಸರಿಂದ ತಲೆಮರೆಸಿಕೊಂಡಿದ್ದ ಶ್ರೀಮತಿ ಕೇರಳದಲ್ಲಿದ್ದು, ಕಳೆದ ನವೆಂಬರ್‌ನಲ್ಲಿ ಆಕೆಯನ್ನು ಪತ್ತೆ ಹಚ್ಚಿ ಕೇರಳ ಪೊಲೀಸರು ಬಂಧಿಸಿದ್ದರು. ಇದೀಗ ವಿಚಾರಣೆಗಾಗಿ ಕಾರ್ಕಳಕ್ಕೆ ಕರೆತಂದಿದ್ದು ಡಿವೈಎಸ್‌ಪಿ ಅರವಿಂದ್ ಎನ್.‌ ಕಲಗುಜ್ಜಿ ಅವರ ನೇತೃತ್ವದ ತಂಡ ತೀವ್ರ ವಿಚಾರಣೆ ನಡೆಸುತ್ತಿದೆ.
ಇಂದು (ಫೆ. 15) ಪ್ರಕರಣ ನಡೆದ ಕಬ್ಬಿನಾಲೆಗೆ ನಕ್ಸಲ್ ನಾಯಕಿ ಶ್ರೀಮತಿಯನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುತ್ತಿದ್ದಾರೆ.

ಕಾರ್ಕಳ – ಹೆಬ್ರಿಯಲ್ಲಿ ನಕ್ಸಲ್‌ ಹೆಜ್ಜೆಗುರುತು
2004ರ ಅವಧಿಯಲ್ಲಿ ಹೆಬ್ರಿ – ಕಾರ್ಕಳ ಭಾಗದಲ್ಲಿ ನಕ್ಸಲ್‌ ಚಟುವಟಿಕೆಗಳು ಜೋರಾಗಿತ್ತು. ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ಮತ್ತಾವಿನಲ್ಲಿ ಬಾಂಬ್‌ ಸ್ಫೋಟ ಕೂಡ ನಡೆಸಿದ್ದರು. 2005ರ ಜು. 28ರಂದು ಕಾರ್ಕಳದ ಸರ್ಕಲ್ ಇನ್‌ಸ್ಪೆಕ್ಟರ್ ಆಗಿದ್ದ ರಾಮಚಂದ್ರ ನಾಯ್ಕ್ ಮತ್ತವರ ತಂಡ ನಕ್ಸಲ್ ಕೂಬಿಂಗ್‌ಗೆಂದು ಜೀಪಿನಲ್ಲಿ ಕೊಂಕಣರಬೆಟ್ಟಿನಿಂದ ಮುಟ್ಲುಪಾಡಿ ಕಡೆ ತೆರಳುತ್ತಿದ್ದಾಗ ಮತ್ತಾವು ಕ್ರಾಸ್ ಬಳಿ ನಕ್ಸಲರು ಇರಿಸಿದ್ದ ನೆಲಬಾಂಬ್ ಸ್ಫೋಟಿಸಿ ರಾಮಚಂದ್ರ ನಾಯ್ಕ್ ಹಾಗೂ 14 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಎರಡು ಜೀಪುಗಳು ನೆಲಬಾಂಬ್ ಸ್ಫೋಟಕ್ಕೆ ಹಾನಿಗೊಂಡಿದ್ದವು.
2011ರಲ್ಲಿ ಕಬ್ಬಿನಾಲೆಯಲ್ಲಿ ಸದಾಶಿವ ಗೌಡ ಅವರನ್ನು ಅಪಹರಿಸಿ ನಕ್ಸಲ್‌ ತಂಡ ಕೊಲೆ ಮಾಡಿತ್ತು. ನಂತರ 2016ರಲ್ಲಿ ನೂರಾಲ್‌ಬೆಟ್ಟು ಶಾಲಾ ಪರಿಸರದಲ್ಲಿ ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂಬ ಬ್ಯಾನರ್‌ಗಳನ್ನು ನಕ್ಸಲ್‌ ತಂಡ ಅಳವಡಿಸಿತ್ತು. ಹೀಗೆ 2004 ರಿಂದ 2016ರವರೆಗೆ ನಕ್ಸಲ್‌ ಚಟುವಟಿಕೆಗಳು ಸಕ್ರಿಯವಾಗಿದ್ದು, ಕಾರ್ಕಳ ಹೆಬ್ರಿ ಪರಿಸರದಲ್ಲಿ ಭಯದ ವಾತಾವರಣವಿತ್ತು. ನಂತರದಲ್ಲಿ ನಿಧಾನವಾಗಿ ನಕ್ಸಲ್‌ ಚಟುವಟಿಕೆಗಳು ಕಡಿಮೆಯಾಯಿತು. ಆದರೆ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಲೇ ಇದೆ.































































































































error: Content is protected !!
Scroll to Top