ರಿಯಾಲಿಟಿ ಶೋಗಳಲ್ಲಿ ಕಳೆದುಹೋಗದಿರಲಿ ಮಕ್ಕಳ ಬಾಲ್ಯ

ಇದು ಸ್ಪರ್ಧಾತ್ಮಕ ಜಗತ್ತು. ತಂತ್ರಜ್ಞಾನದ ಯುಗದಲ್ಲಿ ನಾವಿದ್ದೇವೆ. ನಮ್ಮ ಮಕ್ಕಳು ಬಹಳ ಮುಂದುವರಿದಿದ್ದಾರೆ. ಮಕ್ಕಳ ಬದುಕಿನಲ್ಲಿ ಬಹುದೊಡ್ಡ ಪಾತ್ರ ವಹಿಸುವವರು ಪೋಷಕರು, ಶಿಕ್ಷಕರು, ಸ್ನೇಹಿತರು. ಧಾವಂತದ ಯುಗದಲ್ಲಿ ಪ್ರತಿಯೊಬ್ಬರಿಗೂ ನಮ್ಮ ಮಕ್ಕಳು ಮೊದಲ ಸ್ಥಾನದಲ್ಲಿ ಇರಬೇಕು ಎಂಬ ಆಸೆ. ಅದು ಶಾಲೆಯ ಕಲಿಕೆಯಲ್ಲಾಗಲಿ, ಆಟೋಟ ಸ್ಪರ್ಧೆಯಲ್ಲಾಗಲಿ ಅಥವಾ ಪಠ್ಯೇತರ ಚಟುವಟಿಯಾಗಿರಲಿ ರೀತಿಯ ಆರೋಗ್ಯವಂತ ಸ್ಪರ್ಧೆಯಿಬೇಕು.

ಈಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಮಕ್ಕಳು ಪ್ರತಿಭಾವಂತರೆಂದು ತೋರಿಸಲು, ಟಿ.ವಿಯಲ್ಲಿ ಕಾಣಿಸಿಕೊಳ್ಳಬೇಕು, ಪ್ರತಿಷ್ಠೆ, ಪ್ರಚಾರ ಸಿಗಬೇಕು ಎನ್ನುವ ಮಹದಾಸೆ ಪೋಷಕರಿಗೆ. ಅದಕ್ಕಾಗಿ ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಶೋಕಿ ಆರಂಭವಾಗಿದೆ. ಮುಗ್ಧ ಮಕ್ಕಳು ಆಟವಾಡುತ್ತಾ ಬದುಕಿನ ಪುಟ ತೆರೆಯುವಷ್ಟರಲ್ಲಿಯೇ ಅಪ್ಪ ಅಮ್ಮನ ಆಸೆ ಆಕಾಂಕ್ಷೆಗಳನ್ನು ಪೂರೈಸಲು ತಯಾರಾಗಬೇಕಿದೆ. ಮಕ್ಕಳ ಮುಖೇನ ಹೆಸರು ಮಾಡುವ ಪೋಷಕರ ಆತುರ, ಕಾತುರದಲ್ಲಿ ಮಕ್ಕಳ ಬಾಲ್ಯ ಕಳೆದು ಹೋಗುತ್ತಿದೆ. ಮಕ್ಕಳ ಮೂಲಕ ರೀಲ್ಸ್ ಮಾಡಿಸುವ ಮತ್ತೊಂದು ಚಟ ಈಗಿನ ಆಧುನಿಕ ಅಪ್ಪ-ಅಮ್ಮಂದಿರದು.

ಪೋಷಕರ ಆಕಾಂಕ್ಷೆಗಳಿಗೆ ಬಾಲ್ಯ ಬಲಿ

ಇವರ ಆಸೆ-ಆಕಾಂಕ್ಷೆಗಳಿಗೆ ಪುಟ್ಟ ಮಕ್ಕಳು ಬಲಿಯಾಗುತ್ತಿದ್ದಾರೆ. ವಯೋಸಹಜ ಬಾಲಲೀಲೆಗಳಿಂದ ವಂಚಿತರಾಗುತ್ತಿದ್ದಾರೆ. ಆಟ ಪಾಠಕ್ಕೆ ಸಮಯವಿಲ್ಲ. ಏನಿದ್ದರೂ ಟಿವಿಯ ಶೋಗೆ ತಯಾರಿ ನಡೆಸುವ ದೊಡ್ಡ ಜವಾಬ್ದಾರಿ ಪುಟ್ಟ ಮಕ್ಕಳ ಮೇಲಿದೆ. ಅದರ ಜೊತೆಯಲ್ಲಿ ಶಾಲೆಯಲ್ಲಿಯೂ ಸ್ಪರ್ಧೆಗಳಲ್ಲಿ ತಮ್ಮ ಮಗು ಪ್ರಥಮ ಸ್ಥಾನ ಪಡೆಯಬೇಕು. ಪರೀಕ್ಷೆಯಲ್ಲಿ 90 ಶೇಕಡಾಕ್ಕಿಂತ ಹೆಚ್ಚು ಅಂಕ ಬೇಕು. ಅದಕ್ಕಾಗಿ ಶಾಲೆ, ಟ್ಯೂಶನ್ ಎಂದು ಮಗು ಒದ್ದಾಡಬೇಕು. ಈ ರೀತಿಯಲ್ಲಿ ಮುದ್ದು ಮಕ್ಕಳ ಮೇಲೆ ಒತ್ತಡ ಹೇರುವುದು ಎಷ್ಟು ಸರಿ? ಸ್ನೇಹಿತರಿಲ್ಲದ ಬರಿದಾದ ಬಾಳು ಆ ಮಕ್ಕಳದು. ಜೊತೆಯಾಗಿ ಆಟವಾಡಲು ಹೋಗಲು ಅವರಿಗೆ ಸಮಯವಿಲ್ಲ. ಬೇರೆ ಮಕ್ಕಳ ಜೊತೆ ಬೆರೆಯಲು ಅವಕಾಶಗಳಿಲ್ಲ. ಬೆಟ್ಟದಷ್ಟು ಆಸೆಯಿದ್ದರೂ ಸ್ಪರ್ಧೆಗಳ ಒತ್ತಡವಿದೆಯಲ್ಲ.
ಒಂದು ವೇಳೆ ಮಗು ಸರಿಯಾದ ರೀತಿಯಲ್ಲಿ ಪ್ರದರ್ಶನ ನೀಡದಿದ್ದರೆ ಅಪ್ಪ ಅಮ್ಮನ ಚುಚ್ಚುಮಾತುಗಳು ಆ ಮಗುವಿನ ಮೃದು ಮನಸ್ಸಿನ ಮೇಲೆ ಅಳಿಸಲಾಗದ ಕಲೆಯನ್ನು ಮೂಡಿಸುತ್ತದೆ. ಮುಂದೆ ಆ ಮಗು ಯಾವ ವೇದಿಕೆಗೆ ಹೋಗಲೂ ಭಯಪಡುತ್ತದೆ. ಮಗು ಮಾನಸಿಕವಾಗಿ ಕುಗ್ಗಿ ಹೋದರೆ ಅದಕ್ಕೆ ಯಾರು ಹೊಣೆ? ಇದು ಗಂಭೀರವಾಗಿ ಯೋಚಿಸಬೇಕಾದ ವಿಷಯ. ಯಾರೂ ಯಾರನ್ನೂ ದೂರಲು ಇಲ್ಲಿ ಅವಕಾಶವಿಲ್ಲ. ಸೋಲನ್ನು ಸ್ವೀಕರಿಸದ ಆ ಪುಟಾಣಿ ಮಕ್ಕಳು ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಯ ದಾರಿಯನ್ನು ಹುಡುಕಲೂಬಹುದು. ಇದು ಬಹಳ ಸೂಕ್ಷ್ಮ ವಿಷಯವಾದ್ದರಿಂದ ಎಚ್ಚರದಿಂದ ಇರಬೇಕಾಗಿದೆ. ಇಂದಿನ ಮಕ್ಕಳು ಜಾಣರು ನಿಜ. ಬೆರಳ ತುದಿಯಲ್ಲಿ ಅವರು ಇಡೀ ಜಗತ್ತಿನ ಆಗುಹೋಗುಗಳನ್ನು ನೋಡಬಲ್ಲರು. ಆದರೆ ಅವರು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದಾರೆಯೇ ಎನ್ನುವುದು ಚಿಂತಿಸಬೇಕಾದ ವಿಷಯವಾಗಿದೆ.

ಹೆಚ್ಚುತ್ತಿರುವ ಆತ್ಮಹತ್ಯೆ ಪ್ರವೃತ್ತಿ

ಇತ್ತೀಚೆಗೆ ಶಾಲಾ ಶಿಕ್ಷಕರೊಬ್ಬರು ಮಕ್ಕಳ ಆತ್ಮಹತ್ಯೆಯ ಕುರಿತು ಆತಂಕವನ್ನು ವ್ಯಕ್ತಪಡಿಸಿದ್ದು, ಈ ಲೇಖನ ಬರೆಯಲು ಕಾರಣವಾಯಿತು. ಅವರ ಮಾತಿನಲ್ಲೇ ಹೇಳುವುದಾದರೆ “ಮಕ್ಕಳೇಕೆ ಹೀಗೆ? ಇಂದಿನ ಪತ್ರಿಕೆ ತಿರುವುತ್ತಿದ್ದೆ. ಶಾಲೆಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣ ಪರೀಕ್ಷೆಯಲ್ಲಿ ಚೀಟಿ ಇಟ್ಟಿದ್ದಳೆಂದು ಟೀಚರ್ ಬೈದಿದ್ದರು. ಇದರಿಂದ ಅವಮಾನ ತಾಳಲಾರದೆ ಮನೆಯಲ್ಲಿ ನೇಣುಬಿಗಿದುಕೊಂಡಳು. ಪೋಷಕರು ಮತ್ತು ಊರವರು ಶಾಲೆಯ ಮುಂದೆ ವಿದ್ಯಾರ್ಥಿನಿಯ ಶವ ಇಟ್ಟುಕೊಂಡು ಧರಣಿ ಕೂತಿದ್ದರು. ಅವರ ಬೇಡಿಕೆ ಸ್ಪಷ್ಟವಾಗಿತ್ತು. “ಬಾಲಕಿಯ ಸಾವಿಗೆ ಶಿಕ್ಷಕರೇ ಕಾರಣ. ಅವರನ್ನು ನಮ್ಮ ಕೈಗೆ ಕೊಡಿ”. ಬಹುಶಃ ಕೈಗೆ ಸಿಗುತ್ತಿದ್ದರೆ ಟೀಚರನ್ನೂ ಸಮಾಧಿ ಮಾಡುವ ಯೋಚನೆ ಇರಬಹುದು”, ಎಂದ ಅವರ ಮಾತಿಗೆ ದಿಗ್ಮೂಢಳಾದೆ. ಮಗುವನ್ನು ತಪ್ಪು ಮಾಡದಂತೆ ತಿದ್ದಿ, ಬುದ್ಧಿ ಹೇಳುವುದು ಶಿಕ್ಷಕರ ಕರ್ತವ್ಯ. ಚೀಟಿ ಇಡುವುದು ಸರಿಯಲ್ಲ ಎಂದು ಹೇಳಿದ್ದು ತಪ್ಪೇ? ಇದನ್ನು ಯೋಚಿಸದೇ ಪಾಲಕರು ಅದೇ ಶಿಕ್ಷಕಿಯನ್ನು ನಮ್ಮ ಕೈಗೆ ಕೊಡಿ ಎನ್ನಬೇಕಾದರೆ ಎಂತಹ ಉದ್ಧಟತನ. ಇದೇ ರೀತಿಯ ಘಟನೆ ಇನ್ನೊಂದು ಕಡೆ ನಡೆಯಿತು. ವಿದ್ಯಾರ್ಥಿ ಪರೀಕ್ಷೆಗೆ ನಕಲು ಮಾಡುವುದನ್ನು ನೋಡಿ ಆತ ಮಾಡುತ್ತಿರುವುದು ಸರಿಯಲ್ಲ ಎಂದು ತಪ್ಪನ್ನು ಮನವರಿಕೆ ಮಾಡಿದರು. ಇದರಿಂದ ಅವಮಾನಗೊಂಡ ಬಾಲಕ ಮನೆಗೆ ಬಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ. ಪೋಷಕರು ಶಿಕ್ಷಕರ ಮೇಲೆ ಕೇಸು ದಾಖಲಿಸಿದರು. ಈ ಇಬ್ಬರು ಮಕ್ಕಳೂ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದರು. ಮೇಲಿನ ಆತ್ಮಹತ್ಯೆಯ ಘಟನೆಗೆ ಪೂರಕವಾಗಿ ಅವರು ಇನ್ನೊಂದು ವಿಷಯವನ್ನು ತಿಳಿಸಿದರು. ಏಳನೇ ತರಗತಿಯ ಬಾಲಕ ಮೊಬೈಲ್ ಉಪಯೋಗಿಸುವುದನ್ನು ವಿರೋಧಿಸಿದರೆಂದು ಎಂದು ಸಾವನ್ನು ಅಪ್ಪಿಕೊಂಡ. ಇದು ನಮ್ಮ ಮಕ್ಕಳು ಮೊಬೈಲ್‌ಗೆ ಎಷ್ಟರ ಮಟ್ಟಿಗೆ ಎಡಿಕ್ಟ್ ಆಗಿದ್ದಾರೆ ಎನ್ನುವ ಆತಂಕಕಾರಿ ಬೆಳವಣಿಗೆಯನ್ನು ಸೂಚಿಸುತ್ತದೆ.

ಆನ್‌ಲೈನ್ ಶಿಕ್ಷಣ ಬಂದ ನಂತರ ಮಕ್ಕಳು ಮೊಬೈಲನ್ನು ಹೆಚ್ಚು ಉಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪರಿಚಯವಿಲ್ಲದವರಿಗೆ ಸಂಪರ್ಕ ಸಂಖ್ಯೆಯನ್ನು ಕೊಟ್ಟು ಎಷ್ಟೋ ಮಕ್ಕಳು ತಮ್ಮ ಬದುಕನ್ನು ನರಕ ಮಾಡಿಕೊಂಡ ಉದಾಹರಣೆಗಳಿವೆ. ಹೀಗೆ ಆಧುನಿಕ ತಂತ್ರಜ್ಞಾನಗಳಿಂದ ಅನಾಹುತಗಳೂ ಹೆಚ್ಚುತ್ತಿವೆ. ಮಕ್ಕಳು ದಿನೇ ದಿನೇ ಆತ್ಮಸ್ಥೆರ್ಯವನ್ನು ಕಳೆದುಕೊಳ್ಳುತ್ತಿರುವುದು ಶೋಚನೀಯ ಸಂಗತಿ. ಶಾಲೆಯಲ್ಲಿ ಶಿಕ್ಷಕರು ಬೈದರೂ, ಮನೆಯಲ್ಲಿ ತಂದೆ ತಾಯಿ ಬೈದರೆ, ಹೊಡೆದು ಬುದ್ಧಿ ಹೇಳಿದರೆ, ಮೊಬೈಲ್ ಕೊಡದಿದ್ದರೆ, ಕೇಳಿದ್ದನ್ನು ತೆಗೆಸಿಕೊಡದಿದ್ದರೆ ಹೀಗೆ ಸಣ್ಣ ಪುಟ್ಟ ವಿಷಯಗಳಿಗೆ ಮಕ್ಕಳು ಸಾಯುವಂತಹ ಕಠಿಣ ನಿರ್ಧಾರಕ್ಕೆ ಬರುತ್ತಾರೆ ಎಂದರೆ ಇದಕ್ಕಿಂತ ಆತಂಕದ ಸಂಗತಿ ಇನ್ನೊಂದಿಲ್ಲ. ಇದು ಪ್ರಾಥಮಿಕ ಹಂತದ ಮಕ್ಕಳ ಕತೆಯಾದರೆ ಮಕ್ಕಳು ಬೆಳೆಯುತ್ತಿದ್ದಂತೆ ಮಾದಕ ದ್ರವ್ಯದ ವ್ಯಸನಿಗಳಾಗಿ ತಪ್ಪು ದಾರಿ ತುಳಿಯುತ್ತಿರುವುದು ವಿಷಾದನೀಯ ಸಂಗತಿ.
ಈಗ ಮಕ್ಕಳಿಗೆ ಎಲ್ಲವೂ ಕೈಟುಕುವ ರೀತಿಯಲ್ಲಿ ಸಿಗುತ್ತಿದೆ. ಹಸಿವು, ಬಡತನ, ಕಷ್ಟ ಅವರ ಮೇಲೆ ಬೀಳದಂತೆ ಮಧ್ಯಮ, ಬಡವರ್ಗದ ಪೋಷಕರೂ ಪ್ರಯತ್ನಿಸುತ್ತಿದ್ದಾರೆ. ಕೇಳಿದ್ದೆಲ್ಲವೂ ಅನಾಯಾಸವಾಗಿ ಸಿಗುತ್ತಿದೆ. ಅತಿಯಾದ ಮುದ್ದಿನಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಯಾವ ಬುದ್ಧಿವಾದಗಳೂ ಮಕ್ಕಳಿಗೆ ಬೇಡವಾಗಿದೆ. ಹಾಗಾದರೆ ಇದಕ್ಕೆ ಕಾರಣ ಯಾರು ಎಂದು ನಾವು ಯೋಚಿಸಬೇಕಾಗಿದೆ.









































































































error: Content is protected !!
Scroll to Top