ಅವಧಿಗೂ ಮೊದಲೇ ದಡ ಸೇರಿದ ಬೋಟ್‌ಗಳು
ಕಾರ್ಕಳ : ಕರಾವಳಿಯ ಆರ್ಥಿಕತೆಯ ಜೀವಾಳವಾಗಿರುವ ಮೀನುಗಾರಿಕೆ ಮತ್ತೊಮ್ಮೆ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಸಲ ಸಮುದ್ರದಲ್ಲಿ ಹಿಂದೆಂದೂ ಕಾಣದಂತಹ ಮೀನಿನ ಬರ ಕಾಣಿಸಿಕೊಂಡಿದ್ದು, ಇದರ ಪರಿಣಾಮವಾಗಿ ಮೀನಿನ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಜನಸಾಮಾನ್ಯರು ನಿತ್ಯ ಸೇವಿಸುವ ಬಂಗುಡೆ ಬೂತಾಯಿಯಂಥ ಮೀನುಗಳು ಕೂಡ ದುಬಾರಿಯಾಗಿ ಜನ ಚಿಂತೆಗೀಡಾಗಿದ್ದಾರೆ.
ದಡ ಸೇರಿದ ಬೋಟ್‌ಗಳು
ಸಮುದ್ರದಲ್ಲಿ ಮೀನಿನ ಲಭ್ಯತೆ ಕಡಿಮೆಯಾದ ಹಿನ್ನೆಲೆಯಲ್ಲಿ ಬೋಟುಗಳು ಮೀನುಗಾರಿಕೆ ಋತು ಮುಗಿಯುವ ಮೊದಲೇ ದಡ ಸೇರಿವೆ. ಮಲ್ಪೆ ಮತ್ತು ಮಂಗಳೂರು ದಕ್ಕೆಯಿಂದ ಮೀನುಗಾರಿಕೆಗೆ ತೆರಳುವು ಶೇ. 70ರಷ್ಟು ಬೋಟ್‌ಗಳು ಮೀನು ಸಾಕಷ್ಟು ಪ್ರಮಾಣದಲ್ಲಿ ಸಿಗದಿರುವ ಕಾರಣ ನಷ್ಟ ಅನುಭವಿಸಿ ಲಂಗರು ಹಾಕಿವೆ.
ಈ ವರ್ಷದ ಮೀನುಗಾರಿಕೆ ಋತುವಿನ ಆರಂಭದಲ್ಲಿ ಧಾರಾಳ ಮೀನು ಬಲೆಗೆ ಬಿದ್ದು ಮೀನುಗಾರರು ಖುಷಿಯಾಗಿದ್ದರು. ಆದರೆ ಎರಡೇ ತಿಂಗಳಲ್ಲಿ ಈ ಖುಷಿ ಮಾಯವಾಗಿದೆ. ಸಮುದ್ರದಲ್ಲಿ ಮೀನಿನ ಬರ ಗೋಚರಿಸಿದ್ದು ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್‌ಗಳಿಗೆ ಡೀಸೆಲ್ ಖರ್ಚಿನಷ್ಟು ಕೂಡ ಮೀನು ಬಲೆಗೆ ಬೀಳದೆ ನಷ್ಟವಾಗುತ್ತಿದೆ. ಹೀಗಾಗಿ ಶೇ. 70ರಷ್ಟು ದೋಣಿಗಳು ಲಂಗರು ಹಾಕಿವೆ.

ಆಳಮೀನುಗಾರಿಕೆಗೆ ತೆರಳುವ ಬೋಟ್‌ಗಳು 10 ದಿನ ಸಮುದ್ರದಲ್ಲಿದ್ದು ಮೀನು ಹಿಡಿಯಬೇಕಾದರೆ ಡೀಸೆಲ್, ಕಾರ್ಮಿಕರ ಖರ್ಚುವೆಚ್ಚ ಎಂದು ಸುಮಾರು 7 ಲ. ರೂ. ವೆಚ್ಚವಾಗುತ್ತದೆ. 6000 ಲೀಟರ್ ಡೀಸೆಲ್ ಬೇಕಾಗುತ್ತದೆ. 12-15 ಲ. ರೂ. ವರೆಗೆ ಮೀನು ಸಿಕ್ಕಿದರೆ ಮಾತ್ರ ಬೋಟ್ ಮಾಲಕರಿಗೆ ಲಾಭವಾಗುತ್ತದೆ. ಆದರೆ ಈ ಋತುವಿನಲ್ಲಿ ಆಳಸಮುದ್ರಕ್ಕೆ ಮೀನುಗಾರಿಕೆಗೆ ಹೋದ ಬೋಟ್‌ಗಳಿಗೆ 2-3 ಲ. ರೂ. ಮೊತ್ತದ ಮೀನು ಕೂಡ ಸಿಗದೆ ಭಾರಿ ನಷ್ಟವಾಗಿದೆ. ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಮೀನುಗಳ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಪೌಷ್ಟಿಕ ಆಹಾರವಾಗಿರುವ ಮೀನು ದುಬಾರಿಯಾಗಿರುವುದು ಜನರಿಗೂ ಸಮಸ್ಯೆಯಾಗಿದೆ. ಅಂತೆಯೇ ಮೀನುಗಾರಿಕೆಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ನೂರಾರು ಮೀನುಗಾರ ಕುಟುಂಬಗಳೂ ಸಂಕಷ್ಟಕ್ಕೊಳಗಾಗಿವೆ. ಆದರೆ ಸರಕಾರ ಇನ್ನೂ ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾಗಿಲ್ಲ.
ಹೋಟೆಲ್‌ಗಳಿಗೆ ಬರೆ
ಮೀನಿನ ಬೆಲೆ ಏರಿಕೆಯ ಬಿಸಿ ಮೀನು ಊಟದ ಹೋಟೆಲ್‌ಗಳಿಗೂ ತಟ್ಟಿದೆ. ಮೀನುಫ್ರೈ, ಮೀನು ಮಸಾಲ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಲು ಸಾಧ್ಯವಾಗುವುದಿಲ್ಲ. ಒಂದು ಮಿತಿಗಿಂತ ಹೆಚ್ಚಾದರೆ ಗ್ರಾಹಕರು ಕಿರಿಕಿರಿ ಮಾಡುತ್ತಾರೆ ಇಲ್ಲವೇ ಆರ್ಡರ್ ಕ್ಯಾನ್ಸಲ್ ಮಾಡುತ್ತಾರೆ. ನಷ್ಟವಾಗದಂತೆ ಬೆಲೆ ಕಾಯ್ದುಕೊಂಡು ವ್ಯಾಪಾರ ಮಾಡುವುದೇ ಕಷ್ಟವಾಗಿದೆ ಎನ್ನುತ್ತಾರೆ ಓರ್ವ ಹೋಟೆಲ್ ಮಾಲಕ.
ವ್ಯಾಪಾರಿಗಳಿಗೆ ಉದ್ಯೋಗವಿಲ್ಲ
ಕರಾವಳಿಯಲ್ಲಿ ಸಾವಿರಾರು ಮಂದಿ ನಿತ್ಯ ಮಲ್ಪೆ, ಮಂಗಳೂರು ದಕ್ಕೆಗಳಿಂದ ಮೀನು ತಂದು ಮಾರಿ ಜೀವನ ನಿರ್ವಹಣೆ ಮಾಡಿಕೊಂಡಿದ್ದಾರೆ. ಕೊರೊನ ಬಳಿಕ ರಸ್ತೆಯುದ್ದಕ್ಕೂ ಅಲ್ಲಲ್ಲಿ ಮೀನು ಮಾರಾಟ ಕೇಂದ್ರಗಳು ಹುಟ್ಟಿಕೊಂಡಿವೆ. ಸರಿಯಾಗಿ ಮೀನು ಲಭ್ಯವಾದರೆ ಮೀನು ವ್ಯಾಪಾರ ಲಾಭದಾಯಕವಾಗಿರುತ್ತದೆ. ಆದರೆ ಈಗ ಮೀನು ಲಭ್ಯತೆ ಕಡಿಮೆಯಾಗಿ ಈ ವ್ಯಾಪಾರಿಗಳ ಗಳಿಕೆಗೂ ಕಲ್ಲುಬಿದ್ದಿದೆ. ಸಿಗುವುದೇ ಸ್ವಲ್ಪ ಮೀನು, ಜನ ಅದರ ಬೆಲೆ ಕೇಳೀಯೇ ಹೌಹಾರುತ್ತಾರೆ. ಇಷ್ಟು ಕಡಿಮೆ ಮೀನನ್ನು ಮಲ್ಪೆಯಿಂದ ತಂದು ಕಾರ್ಕಳದಲ್ಲಿ ಮಾರಿದರೆ ನಷ್ಟವಾಗುತ್ತದೆ ಎನ್ನುತ್ತಾರೆ ಬಂಡಿಮಠದ ಮೀನು ವ್ಯಾಪಾರಿ ಸುನಿಲ್.
ಕಳೆದ ವರ್ಷ ದೇಶದಲ್ಲೇ ಕರ್ನಾಟಕ ಮೀನುಗಾರಿಕೆಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಮೀನುಗಾರಿಕೆ ದೇಶದ ಜಿಡಿಪಿಗೂ ಮೀನುಗಾರಿಕೆ ಗಣನೀಯ ಕೊಡುಗೆ ನೀಡುತ್ತಿದ್ದು, ಮೀನುಗಾರಿಕೆ ನಂಬಿ ಲಕ್ಷಾಂತರ ಕುಟುಂಬಗಳಿವೆ. ಮೀನಿನ ಬರ ಎದುರಾದರೆ ಅದನ್ನು ನಬಿಕೊಂಡಿರುವ ಇತರ ಉದ್ಯಮಗಳಿಗೂ ನಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಮೀನುಗಾರರ ಸಂಕಷ್ಟಕ್ಕೆ ಸರಕಾರ ತಕ್ಷಣ ಸ್ಪಂದಿಸಬೇಕು ಎಂದು ಮೀನುಗಾರ ಮುಖಂಡರ ಆಗ್ರಹಿಸಿದ್ದಾರೆ.

ಈಗ ಮಾರುಕಟ್ಟೆಯಲ್ಲಿ ಮೀನಿನ ಬೆಲೆ
ಅಂಜಲ್ : 500 (ದೊಡ್ಡದು), 400 (ಸಣ್ಣದು)
ಕೊಡ್ಡಾಯಿ : 300 ರೂ.
ಬೂತಾಯಿ : 150 – 200 ರೂ.
ಬಂಗುಡೆ : 150 – 200 ರೂ.,
ನಂಗ್ : 300 ರೂ.
ಅಡೆ ಮೀನು : 300 ರೂ.
ಮುರು – 200 ರೂ.
ಡಿಸ್ಕೋ – 200 ರೂ.
ಕ್ರ್ಯಾಬ್ – 200 ರೂ.,
ಬೊಳ್ಳೆಂಜೀರ್ : 250 ರೂ.
ಸಿಗಡಿ : 350 ರೂ. – 500 (ದೊಡ್ಡದು)
ಪಯ್ಯೆ – 300 ರೂ.
ಪಾಪ್ಲೇಟ್ -1,300 ರೂ.
ಬೊಂಡಸ್ – 250 ರೂ.










