ಅಪೂರ್ಣ ಕಟ್ಟಡದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠೆಗೆ ಕಾಂಗ್ರೆಸ್‌ ವಿರೋಧ : ಬಿಪಿನ್‌ ಚಂದ್ರಪಾಲ್‌

ಕಾರ್ಕಳ : ಹಿಂದೂ ಧರ್ಮ, ಸಂಸ್ಕೃತಿಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಅಪೂರ್ಣ ವಾಸ್ತುವಿನ ಕಟ್ಟಡದೊಳಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮೂರ್ತಿ ಪ್ರತಿಷ್ಠೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆಯೇ ಹೊರತು ರಾಮ ಮಂದಿರ ನಿರ್ಮಾಣವನ್ನಲ್ಲ. ಅಯೋದ್ಯೆಯಲ್ಲಿ ಶ್ರೀರಾಮನ ದೇಗುಲಕ್ಕೆ ಶಿಲಾನ್ಯಾಸಗೈದದ್ದೇ ಕಾಂಗ್ರೆಸ್ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ ಚಂದ್ರಪಾಲ್‌ ಹೇಳಿದ್ದಾರೆ.

ದೇಗುಲ ನಿರ್ಮಾಣ ಪೂರ್ಣವಾಗದ ಗರ್ಭಗುಡಿಯಲ್ಲಿ ದೇವರ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ, ಶಿಖರ ಪ್ರತಿಷ್ಠೆಯೂ ಸೇರಿ ಯಾವುದೇ ವಿಧಿವಿಧಾನಗಳನ್ನು ಹಿಂದೂ ಧರ್ಮ ಒಪ್ಪುವುದಿಲ್ಲ. ಆಗಮಾದಿ ವಾಸ್ತು ಧರ್ಮಶಾಸ್ತ್ರಗಳಿಗೆ ವಿರುದ್ಧವಾಗಿ ಅವಸರವಾಗಿ ದೇವರ ಪ್ರತಿಷ್ಠೆ ದೇಶಕ್ಕೆ ಗಂಡಾಂತರ ತಂದೀತು ಎಂದು ಈಗಾಗಲೇ ಪ್ರಮುಖ ಮಠಾಧಿಪತಿಗಳು, ಸಂತರು, ಧಾರ್ಮಿಕ ಚಿಂತಕರು ರಾಮಮಂದಿರ ನಿರ್ಮಾಣ ಸಮಿತಿಯನ್ನು ಎಚ್ಚರಿಸಿದ್ದಾರೆ. ಆದಾಗ್ಯೂ ಬಿಜೆಪಿಗರು ಅಯೋದ್ಯೆಯಲ್ಲಿ ಶ್ರೀರಾಮ ದೇವರ ಮೂರ್ತಿ ಪ್ರತಿಷ್ಠೆ ಆಗುವ ಮೊದಲೇ ಮನೆಮನೆಗೆ ಹೋಗಿ ಅಕ್ಷತೆ ಹಂಚುತ್ತಿರುವುದು ತಮಾಷೆಯಾಗಿದೆ. ಅಕ್ಷತೆಗೆ ಅದರದ್ದೇ ಆದ ಧಾರ್ಮಿಕ ಮಹತ್ವವಿದ್ದು ಬಿಜೆಪಿ ತನ್ನ ಕಾರ್ಯಕರ್ತರ ಮೂಲಕ ರಾಜಕೀಯ ಸಂಘಟನೆಗಾಗಿ ಪವಿತ್ರ ಅಕ್ಷತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇವರಿಗೆ ದೇವರ ಭಯವಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‌ನದ್ದು ಕಪಟ ಭಕ್ತಿಯೂ ಅಲ್ಲ. ಡೋಂಗಿ ಹಿಂದುತ್ವವೂ ಅಲ್ಲ. ಅದು ʼಈಶಾವಾಸ್ಯಮಿದಂ ಸರ್ವಂʼ ತತ್ವ. ಶತಮಾನಗಳಿಂದ ಬೀಗ ಜಡಿದು ಹಿಂದೂಗಳಿಗೆ ಪೂಜೆ ಮಾಡಲು ಅವಕಾಶವೇ ಇಲ್ಲದಿದ್ದ ರಾಮಲಲ್ಲಾನ ಗುಡಿಯ ಬೀಗ ತೆಗೆಸಿ ಹಿಂದೂಗಳಿಗೆ ಪೂಜೆಗೆ ಅವಕಾಶ ಮಾಡಿಕೊಡುವ ಮೂಲಕ ರಾಮಮಂದಿರ ನಿರ್ಮಾಣದ ಕನಸನ್ನು ಜನರ ಮನಸ್ಸಿನಲ್ಲಿ ಬಿತ್ತಿದವರೆ ಕಾಂಗ್ರೆಸ್ಸಿನವರು. ಅಲಹಾಬಾದ್ ನ್ಯಾಯಪೀಠದ ಆದೇಶದ ಹೊರತಾಗಿಯೂ ಗುಡಿಯ ಬೀಗ ತೆಗೆಸಿದ್ದು ಮತ್ತು 1989ರಲ್ಲಿ ವಿಶ್ವಹಿಂದೂ ಪರಿಷತ್ ನವರಿಗೆ ಸ್ವತಃ ನಿಂತು ಅಯೋದ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಅವಕಾಶ ಮಾಡಿಕೊಟ್ಟದ್ದೇ ಅಂದಿನ ಪ್ರಧಾನಿ ದಿ. ರಾಜೀವ ಗಾಂಧಿ. ಕಾಂಗ್ರೆಸ್ ನಂಬಿ ನೆಚ್ಚಿಕೊಂಡು ಬಂದಿರುವ ಹಿಂದುತ್ವ ಅದು ಮಹಾತ್ಮ ಗಾಂದೀಜಿ ಪ್ರತಿಪಾದಿಸಿದ ಶ್ರೀ ರಾಮನ ಸ್ವಾಮಿತ್ವದ ಹಿಂದುತ್ವ ಎಂದು ಬಿಪಿನ ಚಂದ್ರಪಾಲ್ ನಕ್ರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

































































error: Content is protected !!
Scroll to Top