ಮಸೀದಿಯನ್ನು ಸಮೀಕ್ಷೆ ನಡೆಸಲು ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ
ದೆಹಲಿ : ಮಥುರಾದ ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಯನ್ನು ಅಡ್ವೊಕೆಟ್ ಕಮಿಷನರ್ ಮೂಲಕ ನಡೆಸಲು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ.
ಶಾಹಿ ಈದ್ಗಾ ಆವರಣದ ಸಮೀಕ್ಷೆ ನಡೆಸಲು ನ್ಯಾಯಲಯದ ನಿಗಾದಲ್ಲಿರುವ ಅಡ್ವೋಕೇಟ್ ಕಮಿಷನರ್‌ರನ್ನು ನೇಮಕ ಮಾಡಬೇಕು ಎಂದು ಅಲಹಾಬಾದ್ ಹೈಕೋರ್ಟ್ಗೆ ಮನವಿಯನ್ನು ಮಾಡಲಾಗಿತ್ತು. ಮನವಿಯ ಮೇರೆಗೆ ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಪರಿಶೀಲಿಸಲು ಆಯೋಗವನ್ನು ನೇಮಿಸಲು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು.
ಅಲಹಾಬಾದ್ ಹೈಕೋರ್ಟ್ನ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮುಸ್ಲಿಂ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಇದೀಗ ಹೈಕೋರ್ಟ್ನ ಈ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಸ್ಥಳೀಯ ಆಯುಕ್ತರ ನೇಮಕವನ್ನು ಕೋರಿ ಸಲ್ಲಿಸಲಾದ ಅರ್ಜಿಯು ಅಸ್ಪಷ್ಟವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 23ರಂದು ವಿಚಾರಣೆಯನ್ನು ನಡೆಸಲಾಗುವುದು ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ಈ ಆದೇಶವನ್ನು ನೀಡಿದೆ. ನ್ಯಾಯಾಲಯದ ಮೂಲಕ ಆಯ್ಕೆಯಾಗಿರುವ ಆಯುಕ್ತರ ನೇಮಕಾತಿ ಅಸ್ಪಷ್ಟವಾಗಿದೆ. ಈ ಆದೇಶ ಯಾವ ಉದ್ದೇಶದ ಮೇಲೆ ನೀಡಲಾಗಿದೆ? ಆದೇಶ ಬಹಳ ನಿರ್ದಿಷ್ಟವಾಗಿರಬೇಕು. ಈ ಸಮೀಕ್ಷೆಯನ್ನು ಮಾಡಲು ನ್ಯಾಯಾಲಯಕ್ಕೆ ಬಿಡಲು ಸಾಧ್ಯವಿಲ್ಲ ಎಂದು ಪೀಠವು ಹಿಂದೂ ಸಂಘಟನೆಗಳ ಪರವಾಗಿರುವ ಹಿರಿಯ ವಕೀಲ ಶ್ಯಾಮ್ ದಿವಾನ್‌ಗೆ ತಿಳಿಸಿದೆ.
ಕೃಷ್ಣ ಜನ್ಮಭೂಮಿ ವಿವಾದ ವಿಚಾರಣೆ ಅಲಹಾಬಾದ್ ಹೈಕೋರ್ಟ್ನಲ್ಲಿಯೇ ನಡೆಸಲಾಗುವುದು. ಈ ಬಗ್ಗೆ ಹಿಂದೂ ಸಂಘಟನೆಗಳಿಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ. ಈ ಅರ್ಜಿ ವಿಚಾರಣೆಯನ್ನು ಜನವರಿ 23ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದೆ.
ಏನಿದು ವಿವಾದ?

ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ಭೂವಿವಾದ ದಶಕಗಳ ಹಿಂದಿನದ್ದು. ರಾಮಜನ್ಮಭೂಮಿಯ ನಂತರ ಉತ್ತರ ಪ್ರದೇಶದ ಹೆಚ್ಚು ಬಲ ಪಡೆದ ಮತ್ತೊಂದು ವಿವಾದ ಮಥುರಾದ ಕೃಷ್ಣ ಜನ್ಮಭೂಮಿ. ಕೃಷ್ಣ ಜನ್ಮಭೂಮಿ ವಿವಾದ ಭಾರಿ ಚರ್ಚೆಗೆ ಕಾರಣವಾಗಿದೆ. ಮಥುರಾದ ಕೃಷ್ಣ ಜನ್ಮಭೂಮಿ ದೇವಾಲಯದ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿ ಒಂದು ಕಾಲದಲ್ಲಿ ಹಿಂದೂ ದೇವಾಲಯವಾಗಿತ್ತು ಎಂಬುದಕ್ಕೆ ಅನೇಕ ಸಾಕ್ಷಿಗಳು ಸಿಕ್ಕಿವೆ. ಶ್ರೀ ಕೃಷ್ಣನ ಜನ್ಮಸ್ಥಳವು ಮಸೀದಿಯ ಕೆಳಗೆ ಇದೆ ಮತ್ತು ಮಸೀದಿಯು ಹಿಂದೂ ದೇವಾಲಯವಾಗಿದೆ ಎಂದು ಹಿಂದುಗಳ ವಾದ.
ಈ ಕಾರಣಕ್ಕೆ ಮಸೀದಿ ಜಾಗ ನಮ್ಮದು ಎಂದು ಹಿಂದೂ ಸಂಘಟನೆಗಳು ಕೋರ್ಟ್ನಲ್ಲಿ ಮನವಿ ಸಲ್ಲಿಸಿವೆ. ಈ ಅರ್ಜಿಗೆ ಸಂಬಂಧಿಸಿದೆಂತೆ ಕಳೆದ ವರ್ಷ ಡಿಸೆಂಬರ್ 14ರಂದು, ಅಲಹಾಬಾದ್ ಹೈಕೋರ್ಟ್ ಶಾಹಿ-ಈದ್ಗಾ ಮಸೀದಿ ಆವರಣವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಸಲು ಆದೇಶ ನೀಡಿತ್ತು.
ಮಸೀದಿಯ 13.37 ಎಕರೆ ಭೂಮಿಯಲ್ಲಿ ಮಥುರಾದ ಕೃಷ್ಣ ಜನ್ಮಭೂಮಿ ದೇವಾಲಯ ಮರುಸ್ಥಾಪಿಸಲು ಮತ್ತು ಅದರ ಕೆಳಗೆ ಶ್ರೀಕೃಷ್ಣನ ಜನ್ಮಸ್ಥಳವಿದೆ ಎಂಬ ವಾದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ಮೇಲೆ ಹೈಕೋರ್ಟ್ ಈ ಆದೇಶವನ್ನು ನೀಡಿದೆ.


































