ಮುಂದಿನ ಒಂದು ವಾರದಲ್ಲಿ ರೈತರ ಖಾತೆಗೆ ಬರ ಪರಿಹಾರದ ಮೊದಲ ಕಂತಿನ ಹಣ ಜಮೆ : ಕೃಷ್ಣ ಬೈರೇಗೌಡ

ರಾಯಚೂರು : ಮುಂದಿನ ಒಂದು ವಾರದಲ್ಲಿ ರಾಜ್ಯದ ರೈತರ ಖಾತೆಗೆ ಬರಪರಿಹಾರದ ಮೊದಲ ಕಂತಿನ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ರಾಯಚೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಹಿಂದೆ ಬರಪರಿಹಾರ, ಅತಿವೃಷ್ಟಿ ಪರಿಹಾರ ನೀಡುವಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದವು. ಎಷ್ಟೋ ಜನ ಬೆಳೆಯನ್ನೇ ಬೆಳೆಯದಿದ್ದರೂ ಅವರಿಗೆ ಪರಿಹಾರದ ಹಣ ಸಿಗುತ್ತಿತ್ತು. ನಿಜವಾಗಿ ಬೆಳೆ ಹಾನಿಯಾದವರಿಗೆ ಪರಿಹಾರ ಸಿಗುತ್ತಿರಲಿಲ್ಲ. ಹಿಂದಿನ ಸರಕಾರ ಇದ್ದಾಗ, ನಾನು ಕೃಷಿ ಸಚಿವನಿದ್ದಾಗಲೂ ಇದನ್ನು ನೋಡಿದ್ದೇನೆ. ಯಾರದೋ ಜಮೀನು, ಇನ್ಯಾರಿಗೋ ಹಣ ಪಾವತಿಯಾಗಿದೆ. ರೈತರ ಬೆಳೆಯೇ ಬೇರೆ, ಪರಿಹಾರ ಬರೋದೆ ಬೇರೆ. ಅಧಿಕಾರಿಗಳು ಬೆಳೆ ಮಾಹಿತಿ ಸೇರಿಸುವಾಗ ತಪ್ಪುಗಳಾಗುತ್ತಿದ್ದವು. ಇದೆಲ್ಲವನ್ನೂ ಸರಿಮಾಡಿ ಬೆಳೆ ಸಮೀಕ್ಷೆ ಆಧಾರದಲ್ಲಿ ಹಣ ಪಾವತಿಯಾಗಲಿದೆ ಎಂದು ಸಚಿವರು ವಿವರ ನೀಡಿದರು.

ಈ ವ್ಯವಸ್ಥೆ ಸರಿಪಡಿಸಲು ಎರಡು ತಿಂಗಳು ತಡವಾಗಿದೆ. ಮುಂದಿನ ಒಂದು ವಾರದಲ್ಲಿ ಮೊದಲ ಕಂತಿನ ಹಣ ಬರಲಿದೆ. 12 ಲಕ್ಷ ಜನರಿಗೆ ಹಣ ಪಾವತಿಸಲು ಆರ್‌ಬಿಐಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ. ಇನ್ನೂ 20 ಲಕ್ಷ ಜನರ ಪೇಮೆಂಟ್ ಆರ್ಡರ್ ಒಂದು ವಾರದಲ್ಲಿ ಕಳುಹಿಸಲಿದ್ದೇವೆ. ಒಟ್ಟು 25-30 ಲಕ್ಷ ಜನರಿಗೆ ಬರ ಪರಿಹಾರದ ಹಣ ಸಿಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕೇಂದ್ರ ಸರಕಾರಕ್ಕೆ ಬರ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿದ್ದು, ಇನ್ನೂ ಹಣ ಬಂದಿಲ್ಲ. ಹೀಗಾಗಿ ನಾವೇ ರೈತರಿಗೆ 2,000 ರೂ.ವರೆಗೆ ಪರಿಹಾರ ನೀಡಲು ನಿರ್ಧರಿಸಿದ್ದೇವೆ. ನಾವು ಕಳುಹಿಸಿರುವ ಮನವಿ ಪ್ರಕಾರ ಮೊದಲ ಕಂತಿನ ಹಣ 800-900 ಕೋಟಿ ರೂ. ಬರಬೇಕು. 4,663 ಕೋಟಿ ರೂ. ಪರಿಹಾರದ ಹಣವನ್ನು ಕೇಂದ್ರ ಸರಕಾರದಿಂದ ಕೇಳಿದ್ದೇವೆ. ಎಲ್ಲಾ ಸೇರಿ 18,172 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರವನ್ನು ಆಗ್ರಹಿಸಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

































































error: Content is protected !!
Scroll to Top