ದೇಶಿ ಕ್ರೀಡೆಯ ಮಹತ್ವ ತಿಳಿದು ಉಳಿಸಿ ಬೆಳೆಸುವ ಕಾರ್ಯವಾಗಲಿ – ಸುನಿಲ್ ಕುಮಾರ್
ಕಾರ್ಕಳ : ದೇಶಿ ಕ್ರೀಡೆಯ ಮಹತ್ವ ಅರಿತು ಶಾಲೆಗಳಲ್ಲಿ ಈ ಕ್ರೀಡೆಗಳಿಗೆ ಉತ್ತೇಜನ ನೀಡುವ ಕಾರ್ಯವಾಗಬೇಕು. ದೇಶಿ ಸೊಗಡಿನ ಕ್ರೀಡೆಗಳು ನಶಿಸಿ ಹೋಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಜ. 12ರಂದು ವಿವೇಕಾನಂದರ ಜನ್ಮದಿನ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ತಾಲೂಕು ಕ್ರೀಡಾ ಭಾರತಿ ವತಿಯಿಂದ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಕಾರ್ಕಳ ಘಟಕದ ಸಹಯೋಗದೊಂದಿಗೆ ಕಾಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ನಡೆದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಕಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ್, ಪುರಸಭಾ ಸದಸ್ಯೆ ರೆಹಮತ್ ಎನ್. ಶೇಖ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಅಬ್ದುಲ್ ಆರಿಸ್, ಮುಖ್ಯ ಶಿಕ್ಷಕ ಸುಧಾಕರ ಪೂಜಾರಿ, ಕ್ರೀಡಾ ಭಾರತಿ ಕಾರ್ಕಳ ತಾಲೂಕು ಅಧ್ಯಕ್ಷ ಶಿವಾನಂದ ಕಾಮತ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಬೈಲೂರು ಮಂಜುನಾಥ ಶೆಟ್ಟಿ, ನರೇಂದ್ರ ಕಾಮತ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರು ವಾಲಿಬಾಲ್ ಪಂದ್ಯಾಟದಲ್ಲಿ ಹಾಗೂ ಶಿಕ್ಷಕಿಯರು ತ್ರೋಬಾಲ್, ಹಗ್ಗಜಗ್ಗಾಟ ಪಂದ್ಯಾಟಗಳಲ್ಲಿ ಭಾಗವಹಿಸಿದರು.
ತಾಲೂಕು ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕ್ರೀಡಾ ಭಾರತಿಯ ವಿಭಾಗ ಸಂಯೋಜಕ ಪ್ರಸನ್ನ ಶೆಣೈ ಪ್ರಾಸ್ತವಿಕ ಮಾತುಗಳನ್ನಾಡಿದರು. ತಾಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ಆಚಾರ್ಯ ವಂದಿಸಿದರು. ಕ್ರೀಡಾ ಭಾರತಿಯ ಕಾರ್ಕಳ ತಾಲೂಕು ಕಾರ್ಯದರ್ಶಿ ಸಂಜಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.






























































