ತನ್ನ ರುಚಿ ರಾಮ ರುಚಿ; ತನ್ನ ಸಂತುಷ್ಟಿ ಪರಿ|
ಪೂರ್ಣವಪ್ಪುದು ರಾಮಸಂತುಷ್ಟಿಯಿಂದ||
ಎನ್ನುವಾ ಸಾಜದಾ ದೈವಾತ್ಮಭಾವದಲಿ|
ಧನ್ಯಳಾದಳು ಶಬರಿ – ಮಂಕುತಿಮ್ಮ||
ತನಗೆ ರುಚಿಯೆನಿಸಿದ್ದು ರಾಮನಿಗೂ ರುಚಿಯೆನಿಸುತ್ತದೆ. ತನಗೆ ಸಂತೃಪ್ತಿಯಾದರೆ ರಾಮನಿಗೂ ಸಂತೃಪ್ತಿಯಾಗುತ್ತದೆ ಎನ್ನುವ ಸಹಜವಾದ ದೈವಾತ್ಮಭಾವವನ್ನು ಹೊಂದಿದ ಶಬರಿ ಅದೇ ರೀತಿಯಲ್ಲಿ ರಾಮನಿಗೆ ಆತಿಥ್ಯವನ್ನು ಮಾಡಿ ಅವನ ಅನುಗ್ರಹಕ್ಕೆ ಪಾತ್ರಳಾದಳು ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಯಾವುದೇ ಆಡಂಬರವಿಲ್ಲದ ನಿರ್ಮಲವಾದ ಸಹಜ ಭಕ್ತಿಗೆ ಭಗವಂತನು ಒಲಿಯುತ್ತಾನೆ ಎನ್ನುವುದಕ್ಕೆ ಶಬರಿ ನಮಗೆ ಮಾದರಿಯಾಗುತ್ತಾಳೆ. ಮತಂಗ ಮುನಿಯ ಶಿಷ್ಯೆಯಾದ ಶಬರಿ ಅವರ ಆಶ್ವಾಸನೆಯಂತೆ ಬದುಕಿನ ಮುಕ್ತಿಗಾಗಿ ಶ್ರೀರಾಮನ ಬರುವಿಕೆಗಾಗಿ ಕಾತರದಿಂದ ಕಾಯುತ್ತಾಳೆ. ಅವನ ಆತಿಥ್ಯಕ್ಕಾಗಿ ಕಾಡಿನಲ್ಲಿ ದೊರೆಯುವ ಹಣ್ಣುಗಳನ್ನು ಆರಿಸಿ ತರುತ್ತಾಳೆ. ರಾಮನಿಗಾಗಿ ಹಣ್ಣುಗಳನ್ನು ಆರಿಸುವಾಗ ಅವುಗಳನ್ನು ಕಚ್ಚಿ ನೋಡಿ ಸಿಹಿಯಾದದ್ದನ್ನು ಮಾತ್ರ ಆಯ್ಕೆ ಮಾಡುತ್ತಾಳೆ. ಶ್ರೀರಾಮನು ತನ್ನ ಆಶ್ರಮಕ್ಕೆ ಬಂದಾಗ ತಾನು ಆರಿಸಿ ತಂದ ಹಣ್ಣುಗಳನ್ನು ನೀಡಿ ಸತ್ಕರಿಸುತ್ತಾಳೆ. ರಾಮನು ಆ ಹಣ್ಣುಗಳನ್ನು ತಿಂದು ಇಷ್ಟು ರುಚಿಯಾದ ಹಣ್ಣುಗಳನ್ನು ನಾನು ಇದುವರೆಗೆ ತಿಂದಿಲ್ಲ ಎಂದು ಸಂತೊಷದಿಂದ ಸ್ವೀಕರಿಸುತ್ತಾನೆ.

ನಂಬಿ ನೀನನವರತ ತುಂಬುಮನದಿಂ ನೆನೆಯೆ|
ಇಂಬಿನಿಂದೊಲಿಯುವನು ಶಂಭು ತಾನು||
ನಂಬಿಗೆಯೆ ಕಾರಣವು ಸಾಂಬ ತಾನೊಲಿಯಲಿಕೆ|
ನಂಬಿ ಕಟ್ಟವರಿಲ್ಲ – ಬೋಳುಬಸವ||
ಎಂಬ ಕವಿ ನಿಜಗುಣ ಶಿವಯೋಗಿಯವರ ಮಾತಿನಂತೆ ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ನಿಜವಾಗಿದೆ. ಸಹನೆ ಮತ್ತು ನಂಬಿಕೆಯಿಂದ ರಾಮನ ಬರವಿಗಾಗಿ ಕಾದ ಶಬರಿ ಕೊನೆಗೂ ಶ್ರೀರಾಮ ದರ್ಶನದೊಂದಿಗೆ ಜೀವನ್ಮುಕ್ತಿಯನ್ನು ಪಡೆಯುತ್ತಾಳೆ.
ನಿರಪೇಕ್ಷೆಯ ನಿರ್ಮಲವಾದ ಪ್ರೀತಿಯೇ ನಿಜವಾದ ಭಕ್ತಿ. ನಾಟಕೀಯತೆ ಹಾಗೂ ಆಡಂಬರವಿಲ್ಲದ ಸಹಜ ನಿಷ್ಠೆಯ ಭಕ್ತಿಗೆ ಭಗವಂತನು ಒಲಿಯುತ್ತಾನೆ ಎನ್ನುವುದಕ್ಕೆ ಶಬರಿಯೇ ನಮಗೆ ಆದರ್ಶವಾಗಿತ್ತಾಳೆ. ದೇವರಿಗೆ ಅರ್ಪಿಸುವ ವಸ್ತುವಿಗಿಂತ ಕೊಡುವಾಗಿನ ಭಾವ ಮುಖ್ಯವಾಗಿರುತ್ತದೆ. ಪ್ರೀತಿಯಿಂದ ಕೊಟ್ಟರೆ ವಿಷವು ಅಮೃತವಾಗುತ್ತದೆ ಎಂಬಂತೆ ಶಬರಿ ಪ್ರೀತಿಯಿಂದ ಕೊಟ್ಟ ಹಣ್ಣು ರಾಮನಿಗೆ ಎಂಜಲಾಗಿ ಕಾಣದೆ ಅಮೃತದ ಸವಿಯನ್ನು ನೀಡಿತ್ತು. ಅಂದು ಶಬರಿಯ ನಿಷ್ಠೆಗೆ ಒಲಿದಂತೆ ಇಂದು ಬಹುಸಂಖ್ಯಾತ ಭಾರತೀಯರ ದೀರ್ಘಕಾಲದ ಕನಸು ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಮೂಲಕ ನನಸಾಗುತ್ತಿದೆ. ಶಬರಿಯಂತೆ ಸಹಜವಾದ ಭಕ್ತಿಯಿಂದ ಆ ರಾಮನನ್ನು ನಮ್ಮ ಮನೆಮನಗಳಲ್ಲಿ ತುಂಬಿಕೊಳ್ಳೋಣ. ಆ ದೈವಾತ್ಮ ಭಾವದಿಂದ ನಮ್ಮೆಲ್ಲರ ಜೀವನ ಸಾರ್ಥಕವಾಗುವುದಲ್ಲವೆ?


































































