ಹಿಂದು ರಾಷ್ಟ್ರ : ಯತೀಂದ್ರ ಹೇಳಿಕೆಗೆ ಪೇಜಾವರಶ್ರೀ ಆಕ್ಷೇಪ

ಉಡುಪಿ: ಭಾರತ ಹಿಂದೂ ರಾಷ್ಟ್ರವಾದರೆ ಅಪಾಯ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಹೇಳಿಕೆಗೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯೂ ಆಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, ಭಾರತ ಹಿಂದೂ ರಾಷ್ಟ್ರ ಮಾಡಲಾಗುತ್ತಿದೆ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಮತ್ತು ಗೋದ್ರಾ ಮಾದರಿಯ ಘಟನೆ ಮರುಕಳಿಸುತ್ತಿದೆ ಎಂದಿರುವ ಕಾಂಗ್ರೆಸ್ ಎಂಎಲ್ ಸಿ ಬಿ.ಕೆ. ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತವನ್ನು ಪಾಕಿಸ್ಥಾನ ಮಾಡಲು ಯಾರೋ ಸಿದ್ದತೆ ನಡೆಸುತ್ತಿದ್ದಾರೋ ಏನೋ? ಅಂತಹ ಸಿದ್ಧತೆ ಇಲ್ಲಿ ನಡೆಯುತ್ತಿದೆ ಎಂಬುದರ ಮುನ್ಸೂಚನೆ ಯತೀಂದ್ರ ಕೊಡುತ್ತಿದ್ದಾರೆ . ಈ ಹೇಳಿಕೆ ಸರಿಯಲ್ಲ. ಭಾರತ ಹಿಂದೂ ರಾಷ್ಟ್ರವಾಗಿಯೇ ಇತ್ತು. ಜಾತಿ ಧರ್ಮ ಪಂಗಡ ಎಂದು ಮೀಸಲಿರದೆ ಎಲ್ಲರನ್ನ ಅಪ್ಪಿ ಒಪ್ಪಿಕೊಂಡ ದೇಶ ಭಾರತ ಎಂದು ಪ್ರತಿಪಾದಿಸಿದರು.
ರಾಮಭಕ್ತರನ್ನು ಹೆದರಿಸುವ ಭರದಲ್ಲಿ ದೇಶವನ್ನೇ ಹೆದರಿಸುತ್ತಿರುವ ಇವರೇ ನಿಜವಾದ ಭಯೋತ್ಪಾದಕರು. ಅಂತಹ ಘಟನೆ ನಡೆಯುವ ಬಗ್ಗೆ ಮಾಹಿತಿ ಇದ್ದರೆ ಇಲಾಖೆಗೆ ಹೋಗಿ ಯಾಕೆ ಹೇಳುತ್ತಿಲ್ಲ? ಇವರು ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ವಿದ್ವಂಸಕ ಕೃತ್ಯ ಮಾಡಲು ಹೊರಟಿರುವವರ ಬಗ್ಗೆ ಕೇಳಿದರೆ ಹೇಳುತ್ತೇವೆ ಎಂಬ ಹೇಳಿಕೆ ಸರಿಯಲ್ಲ. ಕಾರಣ ವಿದ್ವಂಸಕ ಕೃತ್ಯ ನಡೆಯಲಿ ಎಂಬ ಅರ್ಥ. ಹಾಗಾದ್ರೆ ಇವರು ಪ್ರಜೆಗಳನ್ನು ರಕ್ಷಣೆ ಮಾಡುತ್ತಿದ್ದಾರೋ ಅಥವಾ ವಿದ್ವಂಸಕ ಕೃತ್ಯಗಳನ್ನ ಮಾಡುವವರನ್ನು ರಕ್ಷಣೆ ಮಾಡುತ್ತಿದ್ದಾರೋ ಎಂದು ಪ್ರಶ್ನಿಸಿದ್ದಾರೆ.

















































error: Content is protected !!
Scroll to Top