ಯಾವುದೇ ಸರಕಾರಿ ನೌಕರ ಇಲ್ಲವೇ ಸಾರ್ವಜನಿಕ ಸೇವಕ ಅಥವಾ ಸಾರ್ವಜನಿಕ ಪ್ರತಿನಿಧಿ ತಾನು ಹೊಂದಿರುವ ಅಧಿಕಾರದಿಂದ ನ್ಯಾಯವಾಗಿ ನಿರ್ವಹಿಸಬೇಕಾದ ಕರ್ತವ್ಯಕ್ಕೆ ವೇತನದ ಹೊರತಾಗಿ ಇತರ ಯಾವುದೇ ರೂಪದಲ್ಲಿ ಅನಧಿಕೃತವಾಗಿ ಪ್ರತಿಫಲವನ್ನು ಪಡೆದರೆ ಅದನ್ನು ಭ್ರಷ್ಟಾಚಾರವೆಂದು ಹೇಳಲಾಗುತ್ತಿದೆ.
ಪ್ರತಿಫಲವು ಹಣದ ರೂಪದಲ್ಲಿರಬಹುದು ಇಲ್ಲವೇ ವಸ್ತು, ಉಡುಗೊರೆ, ಬಳುವಳಿ ಇವುಗಳ ರೂಪದಲ್ಲಿಯೂ ಇರಬಹುದು. ಮಾಡಿದ ಕಾರ್ಯಕ್ಕೆ ಪ್ರತಿಫಲವಾಗಿ ವಸ್ತು, ಆಸ್ತಿ, ನೌಕರಿ, ನೇಮಕಾತಿ ಕೊಡುವುದೂ ಇರಬಹುದು. ಇಲ್ಲವೇ ಯಾರಿಗಾಗಿ ಅಂತಹ ಸಾರ್ವಜನಿಕ ಸೇವೆ ಮಾಡುತ್ತಾನೋ ಅದಕ್ಕೆ ಪ್ರತಿಫಲವಾಗಿ ತಾನು ಕಾನೂನಿನಲ್ಲಿ ಸ್ವೀಕರಿಸಬಾರದ ಯಾವುದೇ ವಸ್ತು/ಸೇವೆ ಇವುಗಳನ್ನು ಸ್ವೀಕರಿಸಿದಾಗ ಅದು ಭ್ರಷ್ಟಾಚಾರವೆನಿಸಿಕೊಳ್ಳಬಹುದು. ಸಾರ್ವಜನಿಕ ಸೇವಕ ಇಂತಹ ಪ್ರತಿಫಲ ಬೇರೆಯವರ ಮುಖಾಂತರ ಪಡೆದರೂ ಸಹ ಆತನು ಸ್ವತಃ ಜವಾಬ್ದಾರನಾಗುತ್ತಾನೆ ಮತ್ತು ಆತನಿಗೆ ಸಹಕರಿಸಿದ ಮಧ್ಯವರ್ತಿ ಸಹ ಇಂತಹ ಕಾನೂನು ಬಾಹಿರ ಕೆಲಸಕ್ಕೆ ಸಹಕರಿಸಿದ್ದಕ್ಕೆ ಶಿಕ್ಷಾರ್ಹ ಅಪರಾಧಕ್ಕೆ ಗುರಿಯಾಗಬೇಕಾಗುತ್ತದೆ. ಸಮಾಜದಲ್ಲಿ ಸಾರ್ವಜನಿಕ ಅಧಿಕಾರಿ ಅಥವಾ ಪ್ರತಿನಿಧಿ ತಾನು ಹೊಂದಿರುವ ಅಧಿಕಾರವನ್ನು ಚಲಾಯಿಸುವ ಸಂದರ್ಭದಲ್ಲಿ ತಾನು ಮಾಡುವ ಕೆಲಸಗಳಿಗೆ ಸಾರ್ವಜನಿಕರಿಂದ ಪ್ರತಿಫಲ ಅಪೇಕ್ಷಿಸುವುದು ಭ್ರಷ್ಟಾಚಾರವಾಗಿದ್ದು ಇದು ಬ್ರಿಟಿಷರ ಕಾಲದಿಂದಲೂ ಪ್ರಾರಂಭವಾಗಿ ಈಗ ಸ್ವತಂತ್ರ ಭಾರತದ ಸಮಾಜದ ಕಂಟಕವಾಗಿ ಬೆಳೆದಿರುವ ಹೆಮ್ಮರವಾಗಿರುತ್ತದೆ. ಈ ಕಾರಣದಿಂದ ಈ ಹಿಂದಿನ 1947ರ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮಕ್ಕೆ ಬದಲಾಗಿ 1988ರ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮವನ್ನು ಜ್ಯಾರಿಗೆ ತರಲಾಗಿದ್ದು ಅದೀಗ ಊರ್ಜಿತದಲ್ಲಿರುತ್ತದೆ.
ಕೇಂದ್ರ ಅಥವಾ ರಾಜ್ಯ ಸರಕಾರದ ಸರಕಾರಿ ನೌಕರರು, ಸ್ಥಳೀಯ ಆಡಳಿತ ಸಂಸ್ಥೆಗಳಾದ ಗ್ರಾಮ ಪಂಚಾಯತ್, ಪುರಸಭೆ, ನಗರ ಸಭೆ, ಕಾರ್ಪೊರೇಷನ್ ಇತ್ಯಾದಿ ಸ್ಥಳೀಯ ಆಡಳಿತ ಸಂಸ್ಥೆಗಳ ನೌಕರರು, ಸದಸ್ಯರು ಮತ್ತು ಅಧ್ಯಕ್ಷರುಗಳು, ರಾಜ್ಯ ಇಲ್ಲವೇ ಕೇಂದ್ರ ಸರಕಾರದ ಸ್ವಾಮ್ಯದಲ್ಲಿರುವ ನಿಗಮಗಳು ಮತ್ತು ಮಂಡಳಿಗಳ ಅಧಿಕಾರಿ ವರ್ಗದವರು, ನ್ಯಾಯಾಧೀಶರು, ನ್ಯಾಯಾಲಯದಿಂದ ನೇಮಕ ಮಾಡಲ್ಪಟ್ಟ ಕಮೀಷನರ್, ರಿಸೀವರ್ ಮುಂತಾದ ಅಧಿಕಾರಿಗಳು, ಕೃಷಿ, ಕೈಗಾರಿಕೆ, ವಾಣಿಜ್ಯ, ಬ್ಯಾಂಕಿಂಗ್ ಕಾರ್ಯಗಳಲ್ಲಿ ತೊಡಗಿರುವ ಹಾಗೂ ಸರಕಾರದಿಂದ ಅನುದಾನ ಪಡೆಯುವ ಸಹಕಾರಿ ಸಂಘಗಳ ಅಧ್ಯಕ್ಷ, ಕಾರ್ಯದರ್ಶಿ ಅಥವಾ ಇತರ ಪದಾಧಿಕಾರಿಗಳು, ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಬೋಧಕ ವರ್ಗದವರು, ರಾಜ್ಯ ಇಲ್ಲವೇ ಕೇಂದ್ರ ಸರಕಾರದಿಂದ ಆರ್ಥಿಕ ಸಹಾಯ ಪಡೆಯುತ್ತಿರುವ ಅಥವಾ ಪಡೆದ ಶೈಕ್ಷಣಿಕ ವೈಜ್ಞಾನಿಕ ಮುಂತಾದ ಸಂಸ್ಥೆಗಳ ನೌಕರರು ಮತ್ತು ಪದಾಧಿಕಾರಿಗಳು ಸಹ ‘ಸಾರ್ವಜನಿಕ ಸೇವಕ’ ಈ ವ್ಯಾಖ್ಯೆಯ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ.
ಲೋಕಾಯುಕ್ತ ಸಂಸ್ಥೆ
ಸಾರ್ವಜನಿಕ ಸೇವಕನೆನಿಸಿಕೊಂಡಿರುವ ಯಾವುದೇ ವ್ಯಕ್ತಿಯು ತನ್ನ ಕರ್ತವ್ಯ ನಿರ್ವಹಿಸಲು ಅಥವಾ ತನ್ನ ಕರ್ತವ್ಯದಡಿಯಲ್ಲಿ ಮಾಡಬೇಕಾದ ಕೆಲಸವನ್ನು ಮಾಡದೇ ಇರಲು ಪ್ರತಿಫಲ ಅಪೇಕ್ಷಿಸಿದರೆ ಹಾಗೂ ಯಾವುದೇ ರೂಪದಲ್ಲಿ ಅದನ್ನು ಸ್ವೀಕರಿಸಲು ಪ್ರಯತ್ನಪಟ್ಟರೆ ಇಲ್ಲವೇ ಸ್ವೀಕರಿಸಿದರೆ ಆತನು ಈ ಅಧಿನಿಯಮದ ಪ್ರಕಾರ ಶಿಕ್ಷೆ ಮತ್ತು ದಂಡನೆಗೆ ಗುರಿಯಾಗಬೇಕಾಗುತ್ತದೆ. ಈ ಕುರಿತು ದೂರು ಸಲ್ಲಿಸಲು ಅನುಕೂಲವಾಗುವಂತೆ ಕರ್ನಾಟಕದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿಯೂ ಲೋಕಾಯುಕ್ತ ಪೊಲೀಸ್ ಕಚೇರಿಯನ್ನು ತೆರೆಯಲಾಗಿದ್ದು ಅದರ ಮುಖ್ಯಸ್ಥರು ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸುವ ಅಧಿಕಾರವನ್ನು ಹೊಂದಿರುತ್ತಾರೆ.

ಮುಟ್ಟುಗೋಲು
ಸಾರ್ವಜನಿಕ ಸೇವಕನು ತನ್ನ ಇಲ್ಲವೇ ತನ್ನ ಪರವಾಗಿ ಬೇರೊಬ್ಬ ವ್ಯಕ್ತಿಯ ಹೆಸರಿನಲ್ಲಿ ಹಣ, ವಸ್ತು, ಆಸ್ತಿ ಮುಂತಾದವುಗಳನ್ನು ಹೊಂದಿದ್ದು, ತನ್ನ ಅಧಿಕಾರಾವಧಿಯಲ್ಲಿ ಆತನು ತನ್ನ ಆದಾಯಕ್ಕೆ ಮೀರಿದ ಹಣ, ವಸ್ತು, ಆಸ್ತಿಯನ್ನು ಅವನು ಹೊಂದಿದ್ದರೆ ಅದನ್ನು ಕ್ರಿಮಿನಲ್ ದುರ್ವರ್ತನೆಯೆಂದು ಪರಿಗಣಿಸಿ ಕನಿಷ್ಠ ಒಂದು ವರ್ಷದಿಂದ ಹಿಡಿದು ಗರಿಷ್ಠ 7 ವರ್ಷದವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಲಾಗುವುದಲ್ಲದೆ ದಂಡವನ್ನೂ ವಿಧಿಸಲಾಗುವುದು. ಇದಲ್ಲದೆ ಆತನ ಆದಾಯಕ್ಕೆ ಮೀರಿ ಆತ ಹೊಂದಿರುವ ಹಣ, ಆಸ್ತಿ ಹಾಗೂ ವಸ್ತುಗಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.









































