ಕಾರ್ಕಳ : ದೇಶದ ಪ್ರಜಾತಂತ್ರ ವ್ಯವಸ್ಥೆಯ ದೇಗುಲವಾಗಿರುವ ಪಾರ್ಲಿಮೆಂಟಿನಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭ ವ್ಯಕ್ತಿಯೊಬ್ಬ ಒಳ ನುಸುಳಿ ಬಣ್ಣದ ಹೊಗೆ ಸಿಡಿಸಿ ಆತಂಕ ಸೃಷ್ಠಿಸಿರುವುದು ಕೇಂದ್ರ ಸರಕಾರದ ಆಡಳಿತಾತ್ಮಕ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಪಾರ್ಲಿಮೆಂಟಿಗೆ ಭದ್ರತೆ ಒದಗಿಸಲಾಗದವರು ದೇಶಕ್ಕೆ ಭದ್ರತೆ ಒದಗಿಸಬಲ್ಲರೇ ಎಂಬ ಸಂಶಯ ದೇಶವಾಸಿಗಳನ್ನು ಕಾಡುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ತಿಳಿಸಿದೆ.
ಈಗ ಏನು ಹೇಳುತ್ತಾರೆ ?
ಒಬ್ಬ ಜವಾಬ್ದಾರಿಯುತ ಸಂಸದನಾಗಿ ಪ್ರತಾಪ್ ಸಿಂಹ ತನಗೆ ಪರಿಚಯವೇ ಇಲ್ಲದ ಒಬ್ಬ ವ್ಯಕ್ತಿಗೆ ಪಾರ್ಲಿಮೆಂಟ್ ಪ್ರವೇಶಕ್ಕೆ ಪಾಸ್ ನೀಡಿರುವುದು ಮತ್ತು ಆ ವ್ಯಕ್ತಿ ಶೂ ಒಳಗೆ ಸ್ಮೋಕ್ ಕ್ಯಾನಿಸ್ಟರ್ ಬಚ್ಚಿಟ್ಟುಕೊಂಡು ಎಲ್ಲ ತನಿಖಾ ದ್ವಾರಗಳನ್ನು ದಾಟಿ ಪಾರ್ಲಿಮೆಂಟ್‌ನಲ್ಲಿ ದಾಂಧಲೆ ನಡೆಸಿರುವ ಘಟನೆ ಸಹಜವಾಗಿಯೆ ಪ್ರಶ್ನಾರ್ಥಕವಾಗಿದೆ. ಇದು ಕಳೆದ ಲೋಕಸಭಾ ಚುನಾವಣಾ ಪೂರ್ವ ನಡೆದ ಪುಲ್ವಾಮಾ ದಾಳಿಯ ಭದ್ರತಾ ವೈಫಲ್ಯದ ದುರಂತ ಘಟನೆಯನ್ನು ನೆನಪಿಸುತ್ತದೆ. ಕಳೆದ ಬಾರಿ ಪಂಜಾಬ್ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಆಗಮಿಸುತ್ತಿದ್ದ ಸಂದರ್ಭ ಉಂಟಾದ ಟ್ರಾಫಿಕ್ ಜಾಮ್ ಅನ್ನು ವೈಭವೀಕರಿಸಿ ಅಂದಿನ ಕಾಂಗ್ರೆಸ್ ಸರಕಾರದ ತಲೆಗೆ ಕಟ್ಟಿ ಇದೊಂದು ದುರುದ್ದೇಶಪೂರಿತ ಭದ್ರತಾ ವೈಫಲ್ಯವೆಂದು ಬೀದಿಗೆ ಬಿದ್ದು ಹೊರಳಾಡಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟವರು ಈಗೇನು ಹೇಳುತ್ತಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ದೇಶದ್ರೋಹದ ಆರೋಪ ಹೊರಿಸುತ್ತಿದ್ದರು
ಬಹುಶಃ ಈ ಪ್ರಕರಣದ ಅಪರಾಧಿ ಒಂದು ವೇಳೆ ಕಾಂಗ್ರೆಸ್ ಸಂಸದನ ಪಾಸ್ ಬಳಸಿ ಒಳಪ್ರವೇಶಿಸುತ್ತಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು. ಸಂಸದ ಪ್ರತಾಪ್ ಸಿಂಹ ರಾಜ್ಯ ಪ್ರತಿ ಪಕ್ಷ ನಾಯಕ ಅಶೋಕ್ ಆದಿಯಾಗಿ ಬಿಜೆಪಿ ನಾಯಕರು ಬೀದಿ ಬೀದಿಗಳಲ್ಲಿ ಪ್ರತಿಭಟಿಸಿ ಕಾಂಗ್ರೆಸ್ ಪಕ್ಷಕ್ಕೆ ದೇಶ ದ್ರೋಹದ ಆರೋಪ ಹೊರಿಸಿ ಬೊಬ್ಬಿಡುತ್ತಿದ್ದರು. ಇದೇ ಪಕ್ಷದ ಆಡಳಿತಾವಧಿಯಲ್ಲಿ 22 ವರ್ಷಗಳ ಹಿಂದೆ ವಿಶ್ವವೇ ಬೆಚ್ಚಿ ಬೀಳುವ ರೀತಿಯಲ್ಲಿ ಪಾರ್ಲಿಮೆಂಟಿನ ಮೇಲೆ ಉಗ್ರಗಾಮಿಗಳ ಆಕ್ರಮಣವಾಗಿ ಕೆಲವರು ಅಸುನೀಗಿರುವುದು ಇಲ್ಲಿ ಉಲ್ಲೇಖನೀಯ. ಆ ನಿಟ್ಟಿನಲ್ಲಿ ಇದನ್ನು ದೇಶದ್ರೋಹಿ ವಿಚ್ಛಿದ್ರಕಾರೀ ಶಕ್ತಿಗಳ ಮುಂದಿನ ಗುರಿಸಾಧನೆಯ ಪ್ರಯೋಗಾರ್ಥ ಆಕ್ರಮಣವೆಂದು ಪರಿಗಣಿಸಿ, ಕೇಂದ್ರ ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಯೋಗದ ಸೂತ್ರಧಾರಿಗಳು ಯಾರೇ ಇರಲಿ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.


































