ಬೆಳಗಾವಿ ರಾಜಕಾರಣದಿಂದಲೇ ಕಾಂಗ್ರೆಸ್ ಅವನತಿ ಎಂದ ವಿಪಕ್ಷ ನಾಯಕ
ಬೆಂಗಳೂರು: ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು ಅನುಮಾನ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ. ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ಅವರು 2019ರಲ್ಲಿ ಬೆಳಗಾವಿ ರಾಜಕಾರಣದಿಂದಾಗಿಯೇ ಸರ್ಕಾರ ಪತನವಾಗಿತ್ತು. ಈಗಲೂ ಅಂತಹ ಜ್ವಾಲೆ ಬೆಳಗಾವಿಯಲ್ಲಿ ಕಾಣಿಸಿಕೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಶಾಸಕರನ್ನು ದುಬೈ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಹಿಂದೆ ಬೆಳಗಾವಿ ರಾಜಕಾರಣದಿಂದ ಸರ್ಕಾರವೇ ಬಿದ್ದು ಹೋಗಿತ್ತು. ಮತ್ತೆ ಬೆಳಗಾವಿ ಬೆಂಕಿ ಜ್ವಾಲೆಯಾಗಿ ದುಬೈವರೆಗೆ ಹೋಗಿದೆ ಎಂದಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ತಡೆದರೂ ಶಾಸಕರನ್ನು ಸತೀಶ್ ಜಾರಕಿಹೊಳಿ ಕರೆದುಕೊಂಡು ಹೋಗಿದ್ದಾರೆ. ಲೋಕಸಭಾ ಚುನಾವಣೆ ನಂತರ ಈ ಸರ್ಕಾರ ಇರೋದಿಲ್ಲ. ಕಾಂಗ್ರೆಸ್ನ ಅವನತಿಗೆ ಇದೆಲ್ಲವೂ ಕಾರಣವಾಗಲಿದೆ. ರಾಜ್ಯದಲ್ಲಿ ಒಬ್ಬರು ಅಲ್ಲ, ಮೂವರು ಸಿಎಂಗಳಿದ್ದಾರೆ. ಮುಂದೆ ಅವರು ಯಾವ ಯಾವ ದಿಕ್ಕಿನಲ್ಲಿ ಹೋಗ್ತಾರೋ ನೋಡೋಣ ಎಂದು ಹೇಳಿದ್ದಾರೆ.