ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ತಮ್ಮ ವಿರುದ್ಧ ಭ್ರಷ್ಟಾಚಾರ ನಿಯಂತ್ರಣಾ ದಳ (ಎಸಿಬಿ) ಹಾಗೂ ಪ್ರಸ್ತುತ ಲೋಕಾಯುಕ್ತ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಚಿವ ಜಮೀರ್ ಅಹ್ಮದ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಜಾಗೊಳಿಸಿದೆ. ಈ ಸಂದರ್ಭದಲ್ಲಿ ನ್ಯಾಯಪೀಠ ಜಮೀರ್ ಅಹ್ಮದ್ ಖಾನ್ ಅವರ ಆದಾಯ ಬಲ್ಲ ಮೂಲಗಳಿಂದ ಶೇ. 2031ರಷ್ಟಿದೆ ಎಂಬುದಕ್ಕಾದರೂ ತನಿಖೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ತನಿಖೆಗೆ ಮಧ್ಯಂತರ ತಡೆ ನೀಡಬೇಕು ಎಂದು ಜಮೀರ್ ಅಹ್ಮದ್ ಖಾನ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ ಜಮೀರ್ ಅಹ್ಮದ್ ಖಾನ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ 2023ರ ಏಪ್ರಿಲ್ 6 ರಂದು ಪ್ರಕರಣದ ತನಿಖೆಗೆ ತಡೆ ನೀಡಿದೆ. ಹಾಗಾಗಿ, ಈ ಆದೇಶವನ್ನು ಮುಂದಿನ 30 ದಿನಗಳ ಕಾಲ ಅಮಾನತ್ತಿನಲ್ಲಿಡಲಾಗಿದೆ ಹೈಕೋರ್ಟ್ ಆದೇಶದಲ್ಲಿ ವಿವರಿಸಿದೆ. ಜಾರಿ ನಿರ್ದೇಶನಾಲಯದ (ಇ.ಡಿ) ಮಾಹಿತಿ ಆಧರಿಸಿ ಜಮೀರ್ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿದೆ.
ಐಎಂಎ (ಐ-ಮಾನಿಟರಿ ಅಡ್ವೈಸರಿ) ಹಗರಣದ ಆರೋಪಿ ಮನ್ಸೂರ್ ಅಲಿ ಖಾನ್ ವಿರುದ್ಧ ಇ.ಡಿ. ಈಗಾಗಲೇ ಪ್ರಕರಣ ದಾಖಲಿಸಿದ್ದು, ಜಮೀರ್ ಅಹ್ಮದ್ ಖಾನ್ ಮನೆ ಮೇಲೆಯೂ ದಾಳಿ ನಡೆಸಿದೆ. ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಸೆಕ್ಷನ್ 66ರ ಅಡಿ ಎಸಿಬಿ ಜೊತೆಗೆ ಮಾಹಿತಿ ನೀಡಿದೆ. ಎಸಿಬಿ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಜಾರಿ ನಿರ್ದೇಶನಾಲಯ ಪ್ರಕ್ರಿಯೆ ಪ್ರಾರಂಭಿಸಿತ್ತು. ಆದ್ದರಿಂದ, ಇ.ಡಿ ವರದಿಯ ಆಧಾರದಲ್ಲಿ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿರುವುದು ತಪ್ಪಾಗುವುದಿಲ್ಲ ಎಂದು ಪೀಠ ತಿಳಿಸಿದೆ.
ಸಚಿವ ಜಮೀರ್ ಆಸ್ತಿ ಭಾರೀ ಹೆಚ್ಚಳ, ಆ ಬಗ್ಗೆ ತನಿಖೆ ನಡೆಯಲಿ – ಹೈಕೋರ್ಟ್
