ವೀಡಿಯೊ ಭಾರಿ ವೈರಲ್ – ಬಿಜೆಪಿ ವ್ಯಂಗ್ಯ
ಜೈಪುರ : ಈ ರಾಷ್ಟ್ರದ ಏಕತೆಗಾಗಿ ರಾಹುಲ್ ಗಾಂಧಿಯಂತಹ ನಾಯಕರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿರುವ ವೀಡಿಯೊ ಭಾರಿ ವೈರಲ್ ಆಗಿ ಕಾಂಗ್ರೆಸ್ ಮುಜುಗರ ಅನುಭವಿಸುತ್ತಿದೆ. ಸೋಮವಾರ ರಾಜಸ್ಥಾನದ ಚುನಾವಣೆ ಪ್ರಚಾರ ಸಭೆಯಲ್ಲಿ ಖರ್ಗೆ ಮಾತಿನ ಭರದಲ್ಲಿ ರಾಹುಲ್ ಗಾಂಧಿಗೆ ಹುತಾತ್ಮ ಪಟ್ಟ ಕಟ್ಟಿದ್ದಾರೆ.
ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವ್ಯಂಗ್ಯವಾಡಿದೆ.
ರಾಜಸ್ಥಾನದ ಅನುಪಗಢದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಖರ್ಗೆ, ರಾಹುಲ್ ಗಾಂಧಿಯಂತಹ ನಾಯಕರು ಈ ರಾಷ್ಟ್ರದ ಏಕತೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಭಾಷಣದಲ್ಲಿ ತಪ್ಪಿ ಹೇಳಿದ್ದಾರೆ. ವೇದಿಕೆ ಮೇಲಿದ್ದ ನಾಯಕರೊಬ್ಬರು ಕೂಡಲೇ ಖರ್ಗೆ ಅವರ ಗಮನಕ್ಕೆ ವಿಷಯ ತಂದಿದ್ದಾರೆ. ಆದರೆ ಅದಾಗಲೇ ಖರ್ಗೆ ಹೇಳಿಕೆ ವೀಡಿಯೊದಲ್ಲಿ ಸೆರೆಯಾಗಿತ್ತು. ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25 ರಂದು ಚುನಾವಣೆ ನಡೆಯಲಿದೆ ಇದಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿಯಲ್ಲಿ ಪ್ರಚಾರನಡೆಸುತ್ತಿವೆ.