ಕಾರ್ಕಳ : ಪುರಸಭಾ ವ್ಯಾಪ್ತಿಯಲ್ಲಿ ಎನ್‌ಆರ್ ರಸ್ತೆಯಿಂದ ಸಾಯಿಬಾಬಾ ಮಂದಿರಕ್ಕೆ ಸಾಗುವ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ರಸ್ತೆಯ ಒಂದು ಬದಿ ಜರಿದು ಸಂಚಾರಕ್ಕೆ ಅಡಚಣೆಯಾಗಿದೆ.
ಕಳೆದ ಮಳೆಗಾಲದ ಸಂದರ್ಭ ಇಲ್ಲಿನ ರಸ್ತೆ ಅಗಲೀಕರಣ ಮಾಡುವ ವೇಳೆ ರಸ್ತೆ ಬದಿಗೆ ತಡೆಗೋಡೆ ನಿರ್ಮಿಸಲಾಗಿದ್ದು, ಬದಿಯ ಗದ್ದೆಗೆ ಸಾಗಲು ಕಿರುದಾರಿಯನ್ನು ಬಿಡಲಾಗಿತ್ತು. ಈ ಬಾರಿಯ ಮಳೆಗಾಲಕ್ಕೆ ರಸ್ತೆ ಬದಿ ಜರಿದಿದ್ದು ಹೊಂಡದಂತಾಗಿದೆ. ಇದನ್ನು ತಕ್ಷಣವೇ ಸರಿಪಡಿಸದೆ ಇದ್ದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಅಪಾಯ ಸಂಭವಿಸುವ ಸಾಧ್ಯತೆಯಿದೆ.
ಪ್ರತಿನಿತ್ಯ ಈ ರಸ್ತೆಯಲ್ಲಿ ಶಿರಡಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಸಾಯಿ ಬಾಬಾ ಮಂದಿರ ಹಾಗೂ ಜ್ಞಾನ ಮಂದಿರಕ್ಕೆ ಭೇಟಿ ನೀಡುವವರು ಹಾಗೂ ಸ್ಥಳೀಯರು ಸೇರಿದಂತೆ ನೂರಾರು ಮಂದಿ ಪ್ರಯಾಣಿಸುತ್ತಾರೆ. ರಸ್ತೆಯ ಬದಿ ಜರಿದ ಪರಿಣಾಮ ಎರಡು ಕಡೆಯಿಂದ ವಾಹನಗಳು ಎದುರಾದಾಗ ಚಾಲಕರು ತ್ರಾಸ ಪಡುವಂತಾಗಿದೆ. ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ.
ಕಾಮಗಾರಿ ಪರಿಪೂರ್ಣವಾಗದ ಪರಿಣಾಮ ಈ ಬಾರಿಯ ಮಳೆಗೆ ರಸ್ತೆಯ ಒಂದು ಬದಿ ಜರಿದು ಮಣ್ಣು ಕುಸಿದಿದೆ. ಪರಿಣಾಮವಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ದೊಡ್ಡ ಮಟ್ಟದ ಅಪಾಯ- ಅಪಘಾತ ಸಂಭವಿಸುವ ಮೊದಲು ರಸ್ತೆ ದುರಸ್ತಿ ಮಾಡುವತ್ತ ಸಂಬಂಧಪಟ್ಟ ಇಲಾಖೆ ಗಮನಹರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
– ಸ್ಥಳೀಯರು
ರಸ್ತೆ ದುರಸ್ತಿಯ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಕ್ಷಣವೇ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ.
– ಮಮತಾ
ಪುರಸಭಾ ಸದಸ್ಯರು