ಕಗ್ಗದ ಸಂದೇಶ-ಅಧಿಕಾರ ನಶ್ವರ, ಮಾಡಿದ ಸೇವೆ ಮಾತ್ರ ಶಾಶ್ವತ

ದೊರೆತನದ ಜಟಿಲಗಳ, ಕುಟಿಲಗಳ, ಕಠಿಣಗಳ|
ಭರತನುಳಿಸಿದನೆ, ರಾಮನ ತೀರ್ಪಿಗೆಂದು||
ಅರಿವಿಗಿಹ ಕರ್ತವ್ಯಭಾರವನು ತಾನರಿತು|
ದುರವ ಧರಿಸಿದನವನು–ಮಂಕುತಿಮ್ಮ||

ರಾಮನ ಪಾದುಕೆಯನ್ನು ಸಿಂಹಾಸನದ ಮೇಲಿಟ್ಟು ರಾಮನ ಪ್ರತಿನಿಧಿಯಾಗಿ ರಾಜ್ಯಭಾರ ಮಾಡಿದ ಭರತ ತಾನು ರಾಜನಲ್ಲದಿದ್ದರೂ ರಾಜ್ಯಭಾರದ ನಾನಾ ಜಟಿಲತೆಯನ್ನು,ಕಾಠಿಣ್ಯವನ್ನು ಹಾಗೂ ಕುಟಿಲತೆಯನ್ನು ರಾಮನು ಬಂಧು ಪರಿಹರಿಸಲಿ ಎಂದು ಅವನಿಗಾಗಿ ಉಳಿಸಲಿಲ್ಲ. ಇದೆಲ್ಲಾ ತನ್ನ ಕರ್ತವ್ಯಭಾರವೆಂದು ಭಾವಿಸಿ ಆಡಳಿತದ ಎಲ್ಲಾ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದನು ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಒಂದು ರಾಜ್ಯದ ಆಡಳಿತ ನಡೆಸುವುದು ಒಂದು ಗುರುತರವಾದ ಜವಾಬ್ದಾರಿ. ಸೇವೆ ಮಾಡಲು ದೊರೆತ ಅವಕಾಶ ಎಂದು ಭಾವಿಸಿ ಸಿಕ್ಕಿದ ಅವಕಾಶದಿಂದ ಆದಷ್ಟು ಜನರ ಸೇವೆಯನ್ನು ಮಾಡುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು. ಇದಕ್ಕೆ ಒಂದು ಉತ್ತಮ ನಿದರ್ಶನ ರಾಮಾಯಣದ ಭರತ. ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಜಾರಿಸುವವರೆ ಹೆಚ್ಚು. ಹೆಚ್ಚಿನವರು ಅಧಿಕಾರ ಸಿಕ್ಕಿದ್ದಾಗ ಅಹಂಕಾರದ ಅಮಲೇರಿ ದರ್ಪದಿಂದ ದಬ್ಬಾಳಿಕೆ ನಡೆಸುತ್ತಾರೆ. ಸೇವೆ ಮಾಡಬೇಕೆನ್ನುವುದನ್ನು ಮರೆತು ಶೋಷಣೆ ಮಾಡುತ್ತಾರೆ. ಇವತ್ತಿನ ಹೆಚ್ಚಿನ ಜನಪ್ರತಿನಿಧಿಗಳು ಹಾಗೆ ಅಧಿಕಾರ ಸಿಕ್ಕಿದ ಕೂಡಲೇ ಎಲ್ಲ ಆದರ್ಶಗಳನ್ನು ಮರೆಯುತ್ತಾರೆ.

ಆನೆಯಂ ಜಗ್ಗುವುದು ನೀರಿನೊಳಗಣ ಮೊಸಳೆ|
ಶ್ವಾನಮುಂ ಲೆಕ್ಕಿಸದು ನೆಲದೊಳದನು||
ಮಾನಿಸುವ ಮಂತ್ರಿಯಂ ಕೆಳಗಿಳಿಯಲಳಿಯುವರು|
ಸ್ಥಾನಬಲವಂತಹದು–ಬೋಳುಬಸವ||

ಎಂಬ ಕವಿ ನಿಜಗುಣರ ನುಡಿಯಂತೆ ಅಧಿಕಾದಲ್ಲಿದ್ದಾಗ ಎಲ್ಲರೂ ಕೈ ಮುಗಿಯುತ್ತಾರೆ. ಅಧಿಕಾರದಿಂದ ಇಳಿದಾಗ ಯಾರು ಲೆಕ್ಕಿಸುವುದಿಲ್ಲ. ಅಧಿಕಾರ ನಶ್ವರ, ಮಾಡಿದ ಸೇವೆ ಶಾಶ್ವತ ಎನ್ನುವುದನ್ನು ಮರೆಯಬಾರದು. ಅಧಿಕಾರದ ದರ್ಪದಿಂದ ಮೆರೆಯದೆ ಸಾಧ್ಯವಾದಷ್ಟು ನಿಸ್ವಾರ್ಥ ಮನಸ್ಸಿನಿಂದ ಇತರರಿಗೆ ಸಹಾಯ, ಸಹಕಾರ ಮಾಡಿದವರನ್ನು ಸದಾ ಸ್ಮರಿಸುತ್ತಾರೆ. ಯಾರೊ ನೋಡುತ್ತಾರೆ ಎಂದು ಭಾವಿಸದೆ ಆತ್ಮಪೂರ್ವಕವಾಗಿ ಕರ್ತವ್ಯ ನಿರ್ವಹಿಸಬೇಕು. ಬದುಕಿನಲ್ಲಿ ದೊರೆಯುವ ಅವಕಾಶಗಳೆಲ್ಲ ಆ ಒಡೆಯನು ನೀಡಿದ ಪ್ರಸಾದವೆಂದು ಭಾವಿಸಿ ಭಕ್ತಿ ಮತ್ತು ನಿಷ್ಠೆಯಿಂದ ನಿರ್ವಹಿಸಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?















































































































































error: Content is protected !!
Scroll to Top