ಟೀಮ್ ಇಂಡಿಯಾ ಸರ್ವಾಂಗೀಣ ಆಟ, ಟೀಮ್ ಸ್ಪಿರಿಟ್ಗೆ ಅಭಿಮಾನಿಗಳ ಮೆಚ್ಚುಗೆ
ಗೆದ್ದು ಬಾ ಭಾರತ ಎಂಬ ಹಾರೈಕೆ
ಕಾರ್ಕಳ: ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತ ನಿನ್ನೆಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಲೀಗ್ನ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ನೆದರ್‌ಲ್ಯಾಂಡ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಲೀಗ್ ಮಾದರಿಯಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯವಾಗುಳಿದ ಅಪರೂಪದ ದಾಖಲೆಯೂ ಭಾರತದ ಪಾಲಿಗೆ ದಕ್ಕಿದೆ.
ಲೀಗ್ನ 9 ಪಂದ್ಯಗಳನ್ನೂ ಗೆದ್ದಿರುವ ಭಾರತ 18 ಅಂಕ ಸಂಪಾದಿಸಿದೆ. ಸೆಮಿ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ವಿಶ್ವಕಪ್‌ನಲ್ಲಿ ಅಜೇಯವಾಗಿ ಉಳಿದಿರುವ ಏಕೈಕ ತಂಡ ಭಾರತ ಎನ್ನುವುದೂ ವಿಶೇಷ. ಎಲ್ಲ ಪಂದ್ಯಗಳನ್ನು ಭಾರತ ಅಧಿಕಾರಯುತವಾಗಿಯೇ ಗೆದ್ದಿರುವುದರಿಂದ ಈ ಸಲ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂಬ ಅದಮ್ಯ ವಿಶ್ವಾಸ ಕ್ರಿಕೆಟ್ ಪ್ರೇಮಿಗಳಲ್ಲಿದೆ. ಈ ವರ್ಷ ಗೆಲ್ಲದಿದ್ದರೆ ಇನ್ನು ಯಾವಾಗ ಗೆಲ್ಲುವುದು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಕಪ್‌ಗೆ ಮುತ್ತಿಡಲು ಬಾಕಿಯಿರುವುದು ಇನ್ನ ಎರಡೇ ಪಂದ್ಯಗಳು. ಈ ಪಂದ್ಯಗಳನ್ನು ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ನಿರೀಕ್ಷಿಸುತ್ತಿದೆ.
ದಕ್ಷಿಣ ಆಫ್ರಿಕಾ 9 ಲೀಗ್ ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದೆ. ಟೆಂಬಾ ಬವುಮಾ ಪಡೆ 14 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಲೀಗ್ ಅಭಿಯಾನ ಮುಗಿಸಿದೆ. ದಕ್ಷಿಣ ಆಫ್ರಿಕಾ ತಂಡ 2ನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಆಸ್ಟ್ರೇಲಿಯಾ ಸಹ 9 ಲೀಗ್ ಪಂದ್ಯಗಳಿಂದ 7 ಗೆಲುವು ಸೇರಿದಂತೆ 14 ಅಂಕ ಕಲೆಹಾಕಿದೆ. ನೆಟ್ ರನ್-ರೇಟ್ ವಿಷಯದಲ್ಲಿ ದಕ್ಷಿಣ ಆಫ್ರಿಕಾದ ನಂತರ 3ನೇ ಸ್ಥಾನದಲ್ಲಿದೆ. ನವೆಂಬರ್ 16ರಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್‌ನಲ್ಲಿ ಕಾದಾಟ ನಡೆಸಲಿವೆ.
ನ್ಯೂಜಿಲೆಂಡ್ 9 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 10 ಅಂಕ ಪಡೆದು 4ನೇ ಸ್ಥಾನದಲ್ಲಿ ಲೀಗ್ ಅಭಿಯಾನ ಮುಗಿಸಿದೆ. ಸೆಮಿಫೈನಲ್‌ನಲ್ಲಿ ಭಾರತ ತಂಡದ ಎದುರು ನವೆಂಬರ್ 15ರಂದು ಸೆಣಸಾಟ ನಡೆಸಲಿದೆ.
ಪಾಕಿಸ್ಥಾನ 9 ಪಂದ್ಯಗಳಲ್ಲಿ 4 ಗೆಲುವು, 5 ಸೋಲು ಕಂಡಿದ್ದು, 8 ಅಂಕ ಪಡೆದಿದೆ. ಪಾಕಿಸ್ಥಾನ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ವಿಶ್ವಕಪ್ ಅಭಿಯಾನ ಮುಗಿಸಿದೆ.
ಅಫ್ಘಾನಿಸ್ಥಾನ 9 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ 8 ಅಂಕ ಕಲೆಹಾಕಿದೆ. 6ನೇ ಸ್ಥಾನ ಪಡೆಯುವ ಮೂಲಕ ವಿಶ್ವಕಪ್ ಅಭಿಯಾನ ಮುಗಿಸಿದೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಬಾರಿಯ ವಿಶ್ವಕಪ್ ಅಭಿಯಾನವನ್ನು 9 ಪಂದ್ಯಗಳಲ್ಲಿ 3 ಗೆಲುವು ಸೇರಿದಂತೆ 6 ಅಂಕಗಳೊಂದಿಗೆ ಮುಗಿಸಿದ್ದು, ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಬಾಂಗ್ಲಾದೇಶ 9 ಪಂದ್ಯಗಳಲ್ಲಿ 2 ಗೆಲುವು ಸೇರಿದಂತೆ 4 ಅಂಕಗಳೊಂದಿಗೆ ವಿಶ್ವಕಪ್ ಅಭಿಯಾನವನ್ನು ಪೂರ್ಣಗೊಳಿಸಿತು. ಶಕೀಬ್ ಪಡೆ ಲೀಗ್ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
ಶ್ರೀಲಂಕಾ ತನ್ನ ವಿಶ್ವಕಪ್ ಅಭಿಯಾನವನ್ನು ಲೀಗ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಮುಗಿಸಿತು. 9 ಲೀಗ್ ಪಂದ್ಯಗಳಿಂದ 2 ಗೆಲುವು ಸಾಧಿಸಿದೆ. ದ್ವೀಪ ರಾಷ್ಟ್ರ ಒಟ್ಟು 4 ಅಂಕ ಮಾತ್ರ ಸಂಗ್ರಹಿಸಿದೆ.
ನೆದರ್‌ಲ್ಯಾಂಡ್ಸ್ ಕೊನೆಯ ಲೀಗ್ ಪಂದ್ಯವನ್ನು ಸೋತ ನಂತರ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ವಿಶ್ವಕಪ್ ಅಭಿಯಾನ ಕೊನೆಗೊಳಿಸಿತು. 9 ಪಂದ್ಯಗಳಲ್ಲಿ ಡಚ್ಚರು 2 ಪಂದ್ಯಗಳನ್ನು ಗೆದ್ದಿದ್ದಾರೆ. 4 ಅಂಕ ಸಂಗ್ರಹಿಸಿದ್ದಾರೆ.






































































