ಬೆಂಗಳೂರು : ಹುಲಿ ಉಗುರು ಲಾಕೆಟ್ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್ ಬಂಧನ ಬಳಿಕ ರಾಜ್ಯಾದ್ಯಂತ ಹುಲಿ ಉಗುರು ಭಾರೀ ಆತಂಕ ಸೃಷ್ಟಿಸಿದೆ. ಹುಲಿ ಉಗುರು ಹೊಂದಿದವರಲ್ಲಿ ನಡುಕ ಶುರುವಾಗಿದೆ. ನಟ ದರ್ಶನ ಮತ್ತು ವಿನಯ್ ಗುರೂಜಿ ವಿರುದ್ಧ ಹುಲಿ ಉಗುರು ಹೊಂದಿರುವ ಬಗ್ಗೆ ದೂರು ದಾಖಲಾಗಿದೆ. ಇದೀಗ ನಟ ಜಗ್ಗೇಶ್ ವಿರುದ್ಧವೂ ದೂರು ದಾಖಲಾಗಿದೆ.
ಕಳೆದ ಒಂದು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ ಅವರು ಹುಲಿ ಉಗುರು ಲಾಕೆಟ್ ಧರಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಸಂಬಂಧ ನಟ ಜಗ್ಗೇಶ್ ವಿರುದ್ಧ ಕಾಂಗ್ರೆಸ್ನ ಮಾಜಿ ಎಂಎಲ್ಸಿ ಪಿ.ಆರ್ ರಮೇಶ್, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ದೂರು ನೀಡಿದ್ದಾರೆ.
ನೈಜ್ಯತೆ ಪರಿಶೀಲಿಸಿ ಕಾನೂನಿನಡಿಯಲ್ಲಿ ಕ್ರಮ – ಡಿಸಿಎಫ್ಓ ರವೀಂದ್ರ
ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣಗಳು ಒಂದೊಂದೇ ಬೆಳಕಿಗೆ ಬರುತ್ತಿವೆ. ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇನ್ನು ಈ ಹುಲಿ ಉಗುರಿನ ಲಾಕೆಟ್ ಧರಿಸಿ ಫೋಟೋಗಳು ವೈರಲ್ ಆಗುತ್ತಿರುವ ಬಗ್ಗೆ ಡಿಸಿಎಫ್ಓ ರವೀಂದ್ರ ಅವರು ಪ್ರತಿಕ್ರಿಯಿಸಿ, ಸದ್ಯಕ್ಕೆ ನಮಗೆ ಯಾವ ದೂರು ಬಂದಿಲ್ಲ. ಬೇರೆಯವರು ಹಾಕಿದ್ದರೂ ಕಾನೂನು ಅಡಿಯಲ್ಲಿ ಅಪರಾಧ ಆಗುತ್ತೆ. ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಆಗಿಯೇ ಹೇಳಿದ್ದಾರೆ.

ಅಂತಹ ಪ್ರಕರಣ ನಮ್ಮಲ್ಲಿ ರಿಜಿಸ್ಟರ್ ಅದ್ರೆ ಅದಕ್ಕೆ ಎನು ಬೇಕೋ ಅದನ್ನ ಕ್ರಮ ತೆಗೆದುಕೊಳ್ಳಲು ಅಧಿಕಾರ ಇದೆ. ಅವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಬರುವಂತೆ ಹೇಳಲಾಗುತ್ತೆ. ಬಳಿಕ ಹುಲಿ ಉಗುರಿನ ನೈಜತೆ ಬಗ್ಗೆ ಕನ್ಫರ್ಮ್ ಮಾಡಿಕೊಳ್ಳಬೇಕಿದೆ. ಹಸುವಿನ ಕೊಂಬನ್ನ ಹುಲಿ ಉಗುರು ಎಂದು ಮಾರಾಟ ಮಾಡಲಾಗುತ್ತೆ. ಅದಕ್ಕೆ ಅದರ ನೈಜತೆ ಬಗ್ಗೆ ಪರೀಶಿಲನೆ ಮಾಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.
ವರ್ತೂರ್ ಸಂತೋಷ್ ಅವರನ್ನು ಬಂಧಿಸಿರುವ ಬಗ್ಗೆ ಮಾತನಾಡಿರುವ ಅವರು, ಸಂತೋಷ್ ಅವರನ್ನು ಏಕಾಎಕಿ ದಸ್ತಗಿರಿ ಮಾಡಲಿಲ್ಲ. ಲಾಕೆಟ್ನ ತಪಾಸಣೆ ಮಾಡಿ ಅರ್ಧ ಮುಕ್ಕಾಲು ಗಂಟೆ ಅದರ ನೈಜತೆ ಗೊತ್ತಾದಮೇಲೆಯೇ ಅವರನ್ನ ಬಂಧಿಸಲಾಗಿದೆ. ನಟ ದರ್ಶನ ಹಾಗೂ ಜಗ್ಗೇಶ್ ಅವರ ಹುಲಿ ಉಗುರಿನ ಲಾಕೆಟ್ ವೈರಲ್ ಆಗುತ್ತುರುವ ಬಗ್ಗೆ ಪ್ರತಿಕ್ರಿಯಿಸಿ, ನೋಟಿಸ್ ನೀಡಲು ನನಗೆ ಅವಕಾಶ ಇದೆ. ದೂರು ಬಂದ್ರೆ ನೋಟಿಸ್ ಜಾರಿ ಮಾಡಿ ಅವರನ್ನ ವಿಚಾರಣೆಗೊಳಪಡಿಸಲಾಗುತ್ತೆ ಎಂದು ಸ್ಪಷ್ಟಪಡಿಸಿದರು.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಪ್ರಕಾರ ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹಿಸುವುದು ತಪ್ಪಾಗುತ್ತದೆ. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ






























































