ಕಾರ್ಕಳ : ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ 11ನೇ ವರ್ಷದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಅ. 23 ರಂದು ಮಿಯ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಏಳು ದಿನಗಳ ಕಾಲ ನಡೆದ ಶಿಬಿರದಲ್ಲಿ ಪ್ರತಿನಿತ್ಯವೂ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ನಡೆಸಲಾಗಿತ್ತು. ಜೊತೆಗೆ ಪಥಸಂಚಲನ, ಧ್ವಜಾರೋಹಣ, ಚಿಂತನ ಮಂಥನ, ಶ್ರಮದಾನ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು, ಸಾಂಸ್ಕೃತಿಕ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅವಲೋಕನದಂತಹ ವಿನೂತನ ಕಾರ್ಯಕ್ರಮಗಳು ನಡೆದವು. ಅಲ್ಲದೆ ಮಿಯ್ಯಾರಿನ ಕೆನರಾ ಕರಕುಶಲ ತರಬೇತಿ ಸಂಸ್ಥೆಗೆ ಭೇಟಿ ನೀಡಲಾಗಿತ್ತು. ಎನ್ಎಸ್ಎಸ್ ಮಂಗಳೂರು ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಅವರು ಶಿಬಿರ ಸ್ಥಳಕ್ಕೆ ಭೇಟಿ ನೀಡಿದ್ದರು.
ಸನ್ಮಾನ – ಬಹುಮಾನ
ಕೃಷ್ಣ ಕುಮಾರ್ ಎನ್.ಇ. ಅವರ ವತಿಯಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸ್ವಯಂಸೇವಕರನ್ನು ಸನ್ಮಾನಿಸಲಾಯಿತು ಹಾಗೂ ಎನ್ಎಸ್ಎಸ್ ಘಟಕದ ವತಿಯಿಂದ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಇದೇ ಸಂದರ್ಭ ಶಿಬಿರದ ಕಾರ್ಯಚಟುವಟಿಕೆಗಳಿಗೆ ಸಹಕರಿಸಿದ ದಿವಾಕರ್ ಸೇರ್ವೆಗಾರ್ ಹಾಗೂ ಶಾಲಾ ಮುಖ್ಯ ಶಿಕ್ಷಕ ಸಂಜೀವ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು


ಸ್ವಯಂ ಸೇವಕರ ತಂಡಗಳಲ್ಲಿ ಬೆಳಕು ತಂಡವನ್ನು ಅತ್ಯುತ್ತಮ ಕಾರ್ಯ ನಿರ್ವಹಣಾ ತಂಡ, ಸೌಹಾರ್ದ ತಂಡವನ್ನು ಉತ್ತಮ ಕಾರ್ಯನಿರ್ವಹಣಾ ತಂಡ, ಹಾಗೂ ಚಿಗುರು ತಂಡವನ್ನು ಕ್ರಿಯಾಶೀಲ ತಂಡ ಎಂದು ಗುರುತಿಸಿ ಅಭಿನಂದಿಸಲಾಯಿತು. ಜೊತೆಗೆ ಸ್ವಯಂಸೇವಕರನ್ನು ಉತ್ತಮ ಸ್ವಯಂಸೇವಕ, ಉತ್ತಮ ಶ್ರಮಿಕ ಎಂದು ಗುರುತಿಸಿ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಾತ್ರಿ ಶಿಬಿರ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಶಿಬಿರವನ್ನು ಸಮಾಪನಗೊಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಲಕ್ಷ್ಮಿನಾರಾಯಣ ಕೆ. ಪಿ. ವಹಿಸಿದ್ದರು. ಶ್ಯಾಮ ಎನ್. ಶೆಟ್ಟಿ ನಲ್ಲೂರು, ರಾಜು ಶೆಟ್ಟಿ ರಾಯಿ ಮನೆ, ಸುಧಾಕರ ಶೆಟ್ಟಿ ಮುಡಾರು, ಉದಯ ಪೂಜಾರಿ ಬಜಗೋಳಿ, ಜೆರಾಲ್ಡ್ ಡಿಸಿಲ್ವ ಮಿಯ್ಯಾರು, ಮಂಜುನಾಥ ನಾಯಕ್ ಮಿಯ್ಯಾರು, ಮಿಯ್ಯಾರು ಸ.ಹಿ.ಪ್ರಾ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ. ಎಸ್. ಅಶೋಕ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ವೀರೇಂದ್ರ ವಿ. ಪಿ. ಸ್ವಾಗತಿಸಿ, ಸ್ವಯಂ ಸೇವಕಿ ಅನ್ವಿತಾ ಕಾರ್ಯಕ್ರಮ ನಿರೂಪಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು.


































