ಮುಂಬಯಿ : ಪ್ರತಿಷ್ಠಿತ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ಇದರ 2022-2023 ನೇ ಸಾಲಿನ ವಿಕಾಸ ಪುಸ್ತಕ ಪುರಸ್ಕಾರಕ್ಕೆ ಪತ್ರಕರ್ತ, ಕಾರ್ಕಳ ರೆಂಜಾಳದ ಡಾ. ದಿನೇಶ್ ಶೆಟ್ಟಿ ಅವರ “ಮುಂಬೈ ಕನ್ನಡ ಪತ್ರಿಕೋದ್ಯಮ” ಸಂಶೋಧನ ಕೃತಿ ಆಯ್ಕೆಯಾಗಿದೆ.
ರೆಂಜಾಳರ ಈ ಗ್ರಂಥಕ್ಕೆ ಮುಂಬೈ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. 500 ಕ್ಕೂ ಅಧಿಕ ಪುಟಗಳನ್ನು ಹೊಂದಿರುವ ಈ ಕೃತಿ ಕಳೆದ ವರ್ಷ ಪ್ರಕಟಗೊಂಡು, ಮುಂಬೈ ಬಂಟರ ಸಂಘದಲ್ಲಿ ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯ ಆಯೋಜಿಸಿದ್ದ “ಮುಂಬೈ ಪತ್ರಕರ್ತರ ಸಮಾಗಮ” ಸಂಭ್ರಮದಲ್ಲಿ ಬಿಡುಗಡೆಗೊಂಡಿತ್ತು. ಕೃತಿಯು ಮುಂಬೈ ಕನ್ನಡ ಪತ್ರಿಕೋದ್ಯಮದ ನೂರೈವತ್ತಕ್ಕೂ ಅಧಿಕ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಹಿರಿಯ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಮುಂಬೈಯಲ್ಲಿ ಯುವ ಪತ್ರಕರ್ತರಾಗಿರುವ ರೆಂಜಾಳರು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಎಂಎ ಪದವಿಯನ್ನು ಪ್ರಥಮ ರ್ಯಾಂಕ್ ನೊಂದಿಗೆ ಪೂರೈಸಿದ್ದರು. ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವ ಅವರ ಎಂಫಿಲ್ ಸಂಶೋಧನ ಕೃತಿ “ಗಿರಿಕುಂಜರ”, “ದೀಪದ ಬುಡ ಕತ್ತಲು”, “ಚಿನ್ನದ ಚೆಂಡು” ಕೃತಿಗಳು ಬೆಳಕು ಕಂಡಿವೆ. ಪ್ರತಿ ವರ್ಷ ಮೂರು ಅತ್ಯುತ್ತಮ ಕೃತಿಗಳಿಗೆ ಕಾರ್ನಾಡ್ ಪ್ರತಿಷ್ಠಾನ ವಿಕಾಸ ಪುಸ್ತಕ ಪುರಸ್ಕಾರವನ್ನು ನೀಡುತ್ತಿದ್ದು, ಈ ವರ್ಷ ಡಾ. ದಿನೇಶ್ ಶೆಟ್ಟಿ ರೆಂಜಾಳ, ಡಾ. ಶ್ಯಾಮಲಾ ಪ್ರಕಾಶ್ ಮತ್ತು ಅಮಿತಾ ಭಾಗ್ವತ್ ಅವರ ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿಯು ನಗದು ಪುರಸ್ಕಾರ, ಗೌರವ ಗ್ರಂಥ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿ. 23 ರಂದು ಅಂದೇರಿಯಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟನೆ ತಿಳಿಸಿದೆ.
























