ಇಂಗ್ಲೆಂಡ್ ಸೋಲಿಸಿ ನ್ಯೂಜಿಲ್ಯಾಂಡ್ ಶುಭಾರಂಭ
ಅಹಮದಾಬಾದ್ : ಐಸಿಸಿ ಏಕದಿನ ವಿಶ್ವಕಪ್ 2023ರ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಕಳೆದ ವರ್ಷದ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 9 ವಿಕೆಟ್ ಅಂತರದಲ್ಲಿ ಗೆದ್ದು ಶುಭಾರಂಭ ಮಾಡಿದೆ.
ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ಸ್ಪರ್ಧಾತ್ಮಕ ರನ್ ಪೇರಿಸಿತು. ಇಂಗ್ಲೆಂಡ್ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 282 ಗಳಿಸಿತು. ಇಂಗ್ಲೆಂಡ್ ಪರ ಜಾನಿ ಬೈರ್ಸ್ಟೋವ್ 33, ಜೋ ರೂಟ್ 77, ಹಾರಿ ಬ್ರೋಕ್ 25, ಜೋಸ್ ಬಟ್ಲರ್ 43 ರನ್ ಪೇರಿಸಿದ್ದಾರೆ. ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಮಾಟ್ ಹೆನ್ರಿ 3, ಮಿಚೆಲ್ ಸ್ಯಾಂಟ್ನರ್ ಮತ್ತು ಗ್ಲೇನ್ ಫಿಲಿಪ್ಸ್ ತಲಾ 2 ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ನೀಡಿದ 283 ರನ್ ಗಳ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 36. 2 ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ ಪೇರಿಸಿ ವಿಜಯದ ನಗೆ ಬೀರಿತು. ನ್ಯೂಜಿಲ್ಯಾಂಡ್ ಪರ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಹಾಗೂ ರಚಿನ್ ರವೀಂದ್ರ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಡೆವೋನ್ ಕಾನ್ವೇ 121 ಎಸೆತಗಳಲ್ಲಿ 3 ಸಿಕ್ಸರ್ 19 ಬೌಂಡರಿಯೊಂದಿಗೆ ಅಜೇಯ 152 ರನ್, ರಚಿನ್ ರವೀಂದ್ರ 96 ಎಸೆತಗಳಲ್ಲಿ 5 ಸಿಕ್ಸರ್ 11 ಬೌಂಡರಿಯೊಂದಿಗೆ ಅಜೇಯ 123 ರನ್ ಪೇರಿಸಿದ್ದಾರೆ.




















