ಯಾವುದೇ ಸಿವಿಲ್ ದಾವೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮುಂಚೆ ಸಂಬಂಧಪಟ್ಟ ಪಕ್ಷಗಾರರು ದಾವೆಗೆ/ವಿವಾದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ವಿವರವನ್ನು ಮತ್ತು ಸಮಸ್ತ ದಾಖಲಾತಿಗಳನ್ನು ತಮ್ಮ ವಕೀಲರಿಗೆ ನೀಡುವುದರಿಂದ ವಕೀಲರು ತಾವು ದಾಖಲು ಮಾಡುವ ದಾವೆಯ ಬಗ್ಗೆ ಸೂಕ್ಮವಾಗಿ ಅವಲೋಕಿಸಿ ಉತ್ತಮವಾದ ದಾವಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ನೆರವಾಗುತ್ತದೆ.
ವಾದಾ ಪತ್ರವು ಪ್ರತಿಯೊಂದು ಸಿವಿಲ್ ದಾವೆಯ ತಳಕಟ್ಟು ಎಂಬುದಾಗಿ ಪರಿಗಣಿಸಲ್ಪಡಬೇಕಾಗುತ್ತದೆ. ದಾವಾ ಪತ್ರವು ಸಾಮಾನ್ಯವಾಗಿ ಸಂಬಂಧಪಟ್ಟ ನ್ಯಾಯಾಲಯದ ಹೆಸರು, ಶಿರೋನಾಮೆ ಅಂದರೆ ವಾದಿ ಮತ್ತು ಪ್ರತಿವಾದಿಯರ ಹೆಸರು, ಪ್ರಾಯ ಮತ್ತು ವಿಳಾಸ, ಮತ್ತು ವಾದ ಪತ್ರದ ಮುಖ್ಯ ಭಾಗವಾಗಿರುವ ವಾದಿಯು ತನ್ನ ಪ್ರಕರಣದ ಸಮರ್ಥನೆಗಾಗಿ ಅವಲಂಬಿಸುತ್ತಿರುವ ಪ್ರಮುಖ ವಾಸ್ತವಾಂಶಗಳು ಮತ್ತು ವಾದಿಯು ತನ್ನ ದಾವೆಯ ಮೂಲಕ ಪ್ರತಿವಾದಿಯರ ವಿರುದ್ಧ ಸಾಧಿಸ ಬಯಸುವ ಮತ್ತು ಕೇಳುವ ಹಕ್ಕು ಸಾದನೆ ಮತ್ತು ಪರಿಹಾರಗಳು ಇವುಗಳನ್ನು ಒಳಗೊಂಡಿರುತ್ತದೆ. ಸಿವಿಲ್ ಪ್ರಕ್ರಿಯಾ ಸಂಹಿತೆಯ ನಿಯಮಾನುಸಾರ ವ್ಯಾಜ್ಯ ಕಾರಣದ ಸಂಬಂಧದಲ್ಲಿ ವಾದಿಯು ಯಾವ ಕ್ಲೇಮನ್ನು ಮಾಡಲು ಹಕ್ಕುವುಳ್ಳವನಾಗಿರುತ್ತಾನೊ ಆ ಸಂಪೂರ್ಣ ಕ್ಲೇಮ್ ಆತನ ದಾವೆಯು ಒಳಗೊಂಡಿರತಕ್ಕದ್ದು. ಆದರೆ ದಾವೆಯನ್ನು ಯಾವುದೇ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯೊಳಗೆ ತರುವುದಕ್ಕಾಗಿ ವಾದಿ ತನ್ನ ಕ್ಲೇಮಿನ ಯಾವುದೇ ಭಾಗವನ್ನು ಕೈಬಿಡಬಹುದು.
ಸಾಮಾನ್ಯವಾಗಿ ಸಿವಿಲ್ ದಾವೆಯು ಕೆಲವು ಮುಖ್ಯ ಹಂತಗಳನ್ನು ಒಳಗೊಂಡಿರುತ್ತದೆ. ಅವುಗಳು ಯಾವುದೆಂದರೆ
ಎ) ವಾದಿಯಿಂದ ವಾದಪತ್ರದ ಸಲ್ಲಿಸುವಿಕೆ, ನ್ಯಾಯಾಲಯದಿಂದ ದಾವೆಯ ನೋಂದಣಿ ಮತ್ತು ಪ್ರತಿವಾದಿಗಳಿಗೆ ತಿಳುವಳಿಕೆಯ ಜಾರಿ
ಬಿ) ಪ್ರತಿವಾದಿ ಅಂದರೆ ಎದುರು ಪಕ್ಷಕಾರರಿಂದ ನ್ಯಾಯಾಲಯಕ್ಕೆ ನಿಗದಿತ ದಿನಾಂಕದಂದು ಸ್ವತ: ಅಥವಾ ತಮ್ಮ ವಕೀಲರ ಮೂಲಕ ಹಾಜರಾಗುವಿಕೆ
ಸಿ) ಪ್ರತಿವಾದಿಗಳಿಂದ ಲಿಖಿತ ಹೇಳಿಕೆ ಸಲ್ಲಿಕೆ
ಡಿ) ವಾದಿ ಹಾಗೂ ಪ್ರತಿವಾದಿಗಳಿಂದ ತಮ್ಮ ತಮ್ಮ ದಾಖಲಾತಿಗಳ ಸಲ್ಲಿಸುವಿಕೆ
ಇ) ವಾದಿ ಹಾಗೂ ಪ್ರತಿವಾದಿಯರ ದಾವಾ ಪತ್ರ ಹಾಗೂ ಲಿಖಿತ ಹೇಳಿಕೆಯ ಆದಾರದಲ್ಲಿ ನ್ಯಾಯಾಲಯದಿಂದ ಸೂಕ್ತ ವಿವಾದಾಂಶಗಳ ರಚನೆ
ಎಫ್) ದಾವೆಯ ವಿಚಾರಣೆ ಅಂದರೆ ಪಕ್ಷಗಾರರಿಂದ ತಮ್ಮ ತಮ್ಮ ಪರವಾಗಿ ಹಾಗೂ ತಮ್ಮ ಸಾಕ್ಷಿದಾರರ ಪರವಾಗಿ ನ್ಯಾಯಾಲಯದಲ್ಲಿ ಸಾಕ್ಷಾ ನೀಡಿಕೆ
ಜಿ) ನ್ಯಾಯಾಲಯದಿಂದ ಪ್ರಕರಣಕ್ಕೆ ಸಂಬಂಧಪಟ್ಟ ವಾದವಿವಾದದ ಆಲಿಕೆ
ಎಚ್) ನ್ಯಾಯಾಲಯದಿಂದ ತೀರ್ಪು
ಐ) ಪ್ರಥಮ ಮೇಲ್ಮನವಿ
ಜೆ) ದ್ವಿತೀಯ ಮೇಲ್ಮನವಿ, ಉಚ್ಚ ನ್ಯಾಯಾಲಯಕ್ಕೆ
ಕೆ) ಸರ್ವೊಚ್ಚ ನ್ಯಾಯಾಲಯಕ್ಕೆ ಮನವಿ ಪತ್ರ

ದಾವೆಯನ್ನು ದಾಖಲು ಮಾಡುವ ಸಂದಂರ್ಭದಲ್ಲಿ ನ್ಯಾಯಾಲಯದ ಸಕ್ಷಮತೆಯನ್ನು ನಾವು ಹೂಡುತ್ತಿರುವ ದಾವೆ, ಮನವಿ ಅಥವಾ ಯಾವುದೇ ಪ್ರಕ್ರಿಯೆಯ ಭೌಗೋಳಿಕ ಅಸ್ತಿತ್ವ, ವಿಷಯ, ಅದರ ಮೌಲ್ಯ ಇವುಗಳನ್ನಾದರಿಸಿ ಆಯಾ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯ ಆಧಾರದ ಮೇಲೆ ನಿರ್ಣಯಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ನಾವು ದಾವೆಯ ವಸ್ತು ವಿಷಯ, ಪಕ್ಷಕಾರರು, ನ್ಯಾಯಾಲಯ ನಿರ್ಣಯಿಸಬೇಕಾಗಿರುವ ನಿರ್ದಿಷ್ಟ ಪ್ರಶ್ನೆ ಮತ್ತು ದಾವಾ ಸ್ವತ್ತಿನ ಮಾರುಕಟ್ಟೆ ಬೆಲೆ ಇವುಗಳನ್ನು ನ್ಯಾಯಾಲಯಕ್ಕೆ ನಿಖರವಾಗಿ ಅಥವಾ ನಿರ್ಧಿಷ್ಟವಾಗಿ ತಿಳಿಸಬೇಕಾಗುತ್ತದೆ.
































































