ಬಡವರಿಗೆ ಬದುಕು ಕಟ್ಟಿಕೊಡುವುದೆ ಕಾಂಗ್ರೆಸ್ ಪಕ್ಷದ ಗುರಿ – ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ

ಕಾರ್ಕಳ : ಸಾಮಾಜಿಕ ಸಾಮರಸ್ಯದೊಂದಿಗೆ ಬಡವರಿಗೆ ಬದುಕು ಕಟ್ಟಿಕೊಡುವುದೆ ಕಾಂಗ್ರೆಸ್ ಪಕ್ಷದ ಆಡಳಿತದ ಗುರಿ. ಗೃಹಲಕ್ಷ್ಮಿ ಯೋಜನೆಯ 1.23 ಕೋಟಿ ಫಲಾನುಭವಿಗಳಲ್ಲಿ ಈಗಾಗಲೇ 98 ಲಕ್ಷ ಕುಟುಂಬಗಳಿಗೆ ಈ ಯೋಜನೆ ತಲಪಿದೆ. ಮುಂದಿನ ತಿಂಗಳೊಳಗೆ ಎಲ್ಲ ಕುಟುಂಬಗಳಿಗೆ ಈ ಯೋಜನೆ ತಲುಪಲಿದ್ದು, ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಮಟ್ಟದಲ್ಲಿ ಸರ್ವೆಕಾರ್ಯ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟಿ ಹೇಳಿದರು.

ಅವರು ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಸನೊಟ್ಟಿನಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್‌ನ ಕುಕ್ಕುಂದೂರು ಗ್ರಾಮ ಸಮಿತಿ ಆಯೋಜಿಸಿದ್ದ ನೂತನವಾಗಿ ಆಯ್ಕೆಗೊಂಡ‌ ಪಂಚಾಯತ್‌ ಅಧ್ಯಕ್ಷ ಉಪಾದ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸುವ ಗುರಿಯೊಂದಿಗೆ ಮುಂಬರುವ ತಾಪಂ, ಜಿ.ಪಂ. ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಇಂದಿನ ಆಧ್ಯತೆಯಾಗಿದೆ. ಸ್ಥಳೀಯ ಜನತೆ ಮತ್ತು ಕಾರ್ಯಕರ್ತರ ಸಮಸ್ಯೆಗಳಿಗೆ ಪಕ್ಷದ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದ ಅವರು ಕುಕ್ಕುಂದೂರು ಗ್ರಾಮ ಪಂಚಾಯತ್‌ ನೂತನ ಅಧ್ಯಕ್ಷೆ ಉಷಾ.ಕೆ ಮತ್ತು ಉಪಾಧ್ಯಕ್ಷೆ ಶಶಿ ಸಂತೋಷ್ ಅವರನ್ನು ಅಭಿನಂದಿಸಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಮಾತನಾಡಿ, ಸಮಾಜವನ್ನು ಒಡೆದು ಆಳಿ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿಯ ಕಾಲ ಮುಗಿದಿದೆ ಎಂದು ಭ್ರಮಿಸಲಾಗದು‌. ಮುಂದಿನ ತಾಪಂ, ಜಿಪಂ ಚುನಾವಣೆಯ ಅಗ್ನಿಪರೀಕ್ಷೆ ನಮ್ಮ ಮುಂದಿದ್ದು ಅದರಲ್ಲಿ ಗೆಲುವು ಸಾಧಿಸುವುದು ನಮ್ಮ ಗುರಿಯಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಸಮಿತಿ ಅಧ್ಯಕ್ಷ ಥೋಮಸ್ ಮಸ್ಕರೇನಸ್, ಗ್ರಾಮ ಸಮಿತಿಯ ಸಾಧನೆಗಳನ್ನು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದರು. ಬ್ಲಾಕ್ ಉಪಾಧ್ಯಕ್ಷ‌ ಜೋರ್ಜ್ ಕ್ಯಾಸ್ತಲೀನೋ ಅಭಿನಂದನಾ ಭಾಷಣ ಮಾಡಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.

ದೀಪಾಕ್ಷಿ, ಸೂರಜ್ ನಾಯಕ್, ಪಂಚಾಯತ್‌ ಸದಸ್ಯರಾದ ರೀ‌ನಾ, ವಿಶ್ವನಾಥ ಭಂಡಾರಿ, ಮಾಜಿ ಸದಸ್ಯೆ ವಿನ್ನಿ ಡಿ’ಸೋಜ, ದಯಾನಂದ ಶೆಟ್ಟಿ, ದಯಾನಂದ ಭಂಡಾರಿ, ಸತೀಶ್ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಪ. ಜಾ. ಘಟಕದ ಅಧ್ಯಕ್ಷ ಅಣ್ಣಪ್ಪ ನಕ್ರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಬೈಲೂರು ವಂದಿಸಿದರು.















































































error: Content is protected !!
Scroll to Top