ಭಾವೈಕ್ಯತೆಯೊಂದಿಗೆ ಬದುಕಿದರೆ ಸರ್ವಧರ್ಮ ಸಮನ್ವಯ ಸಾಧ್ಯ : ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಸಹಬಾಳ್ವೆಯಿಂದ ದೇಶದ ಸತ್ಪ್ರಜೆಗಳಾಗಿ ಬಾಳಿ : ಎ. ಎಚ್‌. ಖಾಲಿದ್‌

ಸಮನ್ವಯತೆಯಿಂದ ಭವ್ಯಭಾರತದ ನಿರ್ಮಾಣ : ವಿನ್ಸೆಂಟ್‌ ರಾಬರ್ಟ್‌ ಕ್ರಾಸ್ತಾ

ಯಾವುದು ಧಾರಣ ಯೋಗ್ಯವೋ ಅದೇ ಧರ್ಮ : ಅಶೋಕ್‌ ಭಟ್‌

ಮೂಡಬಿದಿರೆ : ಭಾವೈಕ್ಯತೆಯೊಂದಿಗೆ ಬದುಕಿದರೆ ಮಾತ್ರ ಸರ್ವಧರ್ಮ ಸಮನ್ವಯತೆ ಸಾಧ್ಯ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಹೇಳಿದರು. ಅವರು ಅ. 2ರಂದು ಎಕ್ಸಲೆಂಟ್‌ ಕಾಲೇಜಿನಲ್ಲಿ ನಡೆದ ಸರ್ವ ಧರ್ಮ ಅರಿವು ಸಮಾರಂಭ ಉದ್ಘಾಟಿಸಿ ಬಳಿಕ ಆಶೀರ್ವಚನ ನೀಡಿದರು.

ಮಾನವರಲ್ಲಿರುವ ದುಶ್ಚಟಗಳನ್ನು ಭಗವಂತನ ಉಪಾಸನೆ ಮೂಲಕ ತೊಳೆಯಬಹುದಾಗಿದೆ. ಅಂತರಾತ್ಮನಿಂದ ಪರಮಾತ್ಮನನ್ನು ಕಾಣುವುದೇ ಸನಾತನ ಧರ್ಮ. ಮೂರು ಗಂಟೆಗಳ ಕಾಲ ಸರ್ವಧರ್ಮದ ಅರಿವು ಕಾರ್ಯಕ್ರಮವನ್ನು ಎಕ್ಷಲೆಂಟ್‌ ಕಾಲೇಜಿನಲ್ಲಿ ಆಯೋಜಿಸಿರುವುದು ಸಂತಸದ ವಿಚಾರ ಎಂದರು.

ಅಖಿಲ ಭಾರತ ಬ್ಯಾರಿ ಪರಿಷತ್ತಿನ ಅಧ್ಯಕ್ಷ ಯು. ಎಚ್.‌ ಖಾಲಿದ್ ಮಾತನಾಡಿ‌, ಮಾನವ ಪ್ರೀತಿ, ಸ್ನೇಹ, ನಂಬಿಕೆ, ಸಹಬಾಳ್ವೆಯ ಮೂಲಕ ಜೀವನ ಮಾಡುವುದೇ ಧರ್ಮ. ಇಸ್ಲಾಂ ಧರ್ಮವು ನಿರ್ಗತಿಕರಿಗೆ, ಅಶಕ್ತರಿಗೆ ಮತ್ತು ಬಡವರಿಗೆ ತಾನು ಸಂಪಾದಿಸಿದರಲ್ಲಿ ಒಂದಂಶವನ್ನು ದಾನವಾಗಿ ನೀಡುವುದನ್ನು ತಿಳಿಸುತ್ತದೆ ಎಂದು ಹೇಳಿದ ಅವರು ರಂಜಾನ್‌, ಜಕಾತ್‌ ಮತ್ತು ಹಜ್‌ ಯಾತ್ರೆಯ ಕುರಿತಂತೆ ಧರ್ಮದ ವಿಚಾರವನ್ನು ಹಂಚಿಕೊಂಡರು.

ಸತ್ಪ್ರಜೆಗಳಾಗಿ ಬಾಳಬೇಕಿದೆ

ಬೇರೆ ಬೇರೆ ರಾಷ್ಟ್ರಗಳು ಒಂದೇ ಧರ್ಮವನ್ನು ಪಾಲಿಸಿದರೆ, ಭಾರತಾಂಬೆಯು ಸರ್ವಧರ್ಮದವರನ್ನು ತನ್ನ ಮಡಿಲಲ್ಲಿಟ್ಟು ಬೆಳೆಸುತ್ತಿದ್ದಾಳೆ. ವೈಶಿಷ್ಟ್ಯವಾದ ವೈಜ್ಞಾನಿಕ ನಿಲುವುಗಳು, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಧರ್ಮ ಚಿಂತನೆಗಳ ಮೂಲಕ ಜಗತ್ತಿನಲ್ಲೇ ವಿಶ್ವಗುರುವಾಗಿ ಮೂಡಿಬಂದ ಭಾರತದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕಿದೆ ಎಂದರು.

ಯಾವ ಧರ್ಮವೂ ಕೆಟ್ಟದನ್ನು ಬಯಸುವುದಿಲ್ಲ

ಏಸು ಪ್ರಭು ತನ್ನ ತತ್ವಗಳನ್ನು ಬೋಧಿಸಿದುದರ ಪರಿಣಾಮವಾಗಿ, ಅದುವೇ ಬೈಬಲ್ ಗ್ರಂಥವಾಯಿತು. ನೀವು ಬೇರೆಯವರಲ್ಲಿ ಏನನ್ನು ನಿರೀಕ್ಷಿಸುತ್ತೀರೋ, ಅದನ್ನು ಇತರರಿಗೆ ಮಾಡಿ. ಹೇಗೆ ನಿಮ್ಮನ್ನು ನೀವು ಪ್ರೀತಿಸುತ್ತೀರೋ ಅದೇ ರೀತಿ ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿ. ಯಾವ ಧರ್ಮವೂ ಕೆಟ್ಟದ್ದನ್ನು ಬೋಧಿಸುವುದಿಲ್ಲ. ಎಲ್ಲಾ ಧರ್ಮಗಳು ಒಳ್ಳೆಯದನ್ನೇ ಕಲಿಸುತ್ತವೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಕ್ಯಾಥೋಲಿಕ್‌ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ರೆ| ಫಾ. ವಿನ್ಸೆಂಟ್‌ ರಾಬರ್ಟ್‌ ಕ್ರಾಸ್ತಾ ತಿಳಿಸಿದರು. ನಮ್ಮ ಆಚರಣೆಗಳು ಬೇರೆಯವರಿಗೆ ತೊಂದರೆ ಕೊಡಬಾರದು. ಯಾವುದನ್ನು ಒತ್ತಿ ಹಿಡಿದುಕೊಳ್ಳುತ್ತೇವೆಯೋ ಅದೇ ಧರ್ಮ. ಅದನ್ನು ನಾವು ಅನುಸರಿಸಿ ಎಲ್ಲರೊಂದಿಗೆ ಸೌಹಾರ್ದಯುತವಾಗಿ ಬಾಳಿ ಬದುಕಬೇಕು ಎಂದರು.

ಧರ್ಮವಿರುವುದು ಆಂದೋಲನಕ್ಕಲ್ಲ

ಯಾವುದು ಧಾರಣಯೋಗ್ಯವೋ ಅದುವೇ ಧರ್ಮ. ಧರ್ಮವಿರುವುದು ಧಾರಣಕ್ಕೆ ಹೊರತು ಆಂದೋಲನಕ್ಕೆ ಅಲ್ಲ. ಒಂದು ವಿದ್ಯಾ ಸಂಸ್ಥೆ ಮೂರು ಗಂಟೆಗಳ ಕಾಲ ಸರ್ವಧರ್ಮದ ಕುರಿತಂತೆ ಅರಿವನ್ನು ಮೂಡಿಸುವ ಕಾರ್ಯ ಮಾಡುತ್ತದೆಯೋ ಅದು ಅತ್ಯಂತ ಉನ್ನತವಾದ ವಿದ್ಯಾ ಸಂಸ್ಥೆ ಎಂದು ಯಕ್ಷಗಾನ ಕಲಾವಿದ ಉಜಿರೆ ಅಶೋಕ್‌ ಭಟ್‌ ತಿಳಿಸಿದರು.

ದೇಶದಲ್ಲಿ ಹಲವು ಭಾಷೆ, ಹಲವು ಸಂಸ್ಕೃತಿ, ಹಲವು ದೇವರುಗಳಿದ್ದರೂ ಅದರ ಮೂಲ ಒಂದೇ. ದೇವರೊಬ್ಬನೆ ನಾಮ ಹಲವು. ಒಂದೇ ಮೂಲ ದ್ರವ್ಯದಿಂದ ಹಲವಾರು ವ್ಯಂಜನಗಳನ್ನು ಮಾಡುವಂತೆ ಈ ಭೂಮಿಗೆ ದೇವನೊಬ್ಬನೆ ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಯುವರಾಜ್‌ ಜೈನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರದೀಪ್‌ ಕುಮಾರ್‌ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾರ್ಯದರ್ಶಿ ರಶ್ಮಿತಾ ಜೈನ್‌ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ತೇಜಸ್ವಿ ಭಟ್‌ ನಿರೂಪಿಸಿದರು. ವಾದಿರಾಜ ಕಲ್ಲೂರಾಯ ಗೌರವ ಸಮರ್ಪಿಸಿ, ಮುಖ್ಯೋಪಾದ್ಯಾಯ ಶಿವಪ್ರಸಾದ್‌ ಭಟ್‌ ವಂದಿಸಿದರು.















































































error: Content is protected !!
Scroll to Top