ಧಾರ್ಮಿಕ ಸಭೆ, ದೇವತಾ ಕಾರ್ಯಗಳಲ್ಲಿ ಮುಂದೆ ಕೂರುವ ಮಕ್ಕಳು ಸಂಸ್ಕಾರವಂತರಾಗುತ್ತಾರೆ : ಕಾಳಹಸ್ತೇಂದ್ರ ಸ್ವಾಮೀಜಿ

ಪಡುಕುತ್ಯಾರು : ವಿಶ್ವಕರ್ಮರ ವೃತ್ತಿ ಅನ್ಯರ ಪಾಲಾಗುತ್ತಿದ್ದು, ನಮ್ಮ ವೃತ್ತಿ ಕಸುಬನ್ನು ಮಕ್ಕಳಿಗೆ ತಿಳಿಸಿ ಉನ್ನತೀಕರಿಸಲು ಬೇಕಾದ ಆಧುನಿಕ ತಂತ್ರಜ್ಞಾನ ಬಳಸಿ ಬೆಳೆಸಿ ಉಳಿಸುವಲ್ಲಿ ಗಂಭೀರ ಪ್ರಯತ್ನ ಮಾಡಬೇಕು ಎಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ತಿಳಿಸಿದರು. ಪಡುಕುತ್ಯಾರಿನಲ್ಲಿ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀದಲ್ಲಿ ಸೆ. 28ರಂದು ನಡೆದ ಚಾತುರ್ಮಾಸ್ಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಸಮಾಜದ ಪಂಚವೃತ್ತಿ ಇತಿಹಾಸ ಸೇರದೆ ವಾಸ್ತವವಾಗಿ ಉಳಿಯಬೇಕೆಂದರೆ ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕು. ಅದಕ್ಕೆ ಬೇಕಾದ ತಯಾರಿ ಮಾಡಬೇಕು. ಧರ್ಮದಲ್ಲಿ ಶ್ರದ್ಧೆ ಹೊಂದಬೇಕು. ಬದುಕಿನ ಏರಿಳಿತಗಳಲ್ಲಿ ಚೆನ್ನಾಗಿ ಬದುಕಲು ಯಾವತ್ತೂ ಮುಖದಲ್ಲಿ ಮಂದಹಾಸ, ಮನದಲ್ಲಿ ಮೃದುಬಾವ, ಧ್ವನಿಯಲ್ಲಿ ಸತ್ಯದ ನುಡಿ, ನಡೆಯಲ್ಲಿ ಸತ್ಯದ ನಡೆಯನ್ನು ಅನುಸರಿಸಿದರೆ ಬದುಕು ಸಾರ್ಥಕವಾಗುತ್ತದೆ. ಧಾರ್ಮಿಕ ಸಭೆ, ದೇವತಾ ಕಾರ್ಯ, ಪೂಜಾಗೃಹಗಳಲ್ಲಿ ಮುಂಚೂಣಿಯಲ್ಲಿ ಕೂರುವ ಮಕ್ಕಳು ಸಂಸ್ಕಾರವಂತರಾಗುತ್ತಾರೆ ಎಂದರು.

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಆಸ್ಥಾನ ವಿದ್ವಾಂಸ ಪಂಜ ಭಾಸ್ಕರ ಭಟ್ ಮಾತನಾಡಿ, ಲೋಕಲ್ಯಾಣದ ಜತೆಗೆ ಜನರಲ್ಲಿ ಧರ್ಮ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಒಂದೇ ಕಡೆಯಲ್ಲಿ ನಿಂತು ಆಚರಿಸುವ ವ್ರತವೇ ಚಾತುರ್ಮಾಸ್ಯ ವೃತಾಚರಣೆಯಾಗಿದೆ. ಈ ಅವಧಿಯಲ್ಲಿ ಸ್ವಾಮೀಜಿಯವರ ದರ್ಶನ ಭಾಗ್ಯದಿಂದ ನಮ್ಮೆಲ್ಲರ ಕಷ್ಟ ಕಾರ್ಪಣ್ಯಗಳು ದೂರವಾಗಿ, ಸಮಾಜದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ವಿಶ್ವಕರ್ಮ ಧ್ವಜ ಸಂದೇಶ ನೀಡಿದರು. 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಬಾಡೂರು ಎನ್. ಸುಬ್ರಹ್ಮಣ್ಯ (ಬಾನಾಸು) ಅವರನ್ನು ಅಭಿನಂದಿಸಲಾಯಿತು.

ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ಅಂತರಾಷ್ಟ್ರೀಯ ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು, ವೇ.ಬ್ರ ಶ್ರೀ ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ್ (ಪಂಡಿತ್) ಹುಬ್ಬಳ್ಳಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಸುವರ್ಣ, ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ಧರ್ಮದರ್ಶಿ ಆನಂದ ಸಿ. ಕುಂದರ್, ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಹರೀಶ್ ಆಚಾರ್ಯ ಜಲಕದಕಟ್ಟೆ, ಎಸ್.ಕೆ.ಜಿ.ಐ ಕೋ ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ವಿಶ್ವಕರ್ಮ ಒಕ್ಕೂಟ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಕುತ್ಯಾರು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಆಚಾರ್ಯ ಕುತ್ಯಾರು, ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಅಸೆಟ್ ಅಧ್ಯಕ್ಷ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅದ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀ ಸರಸ್ವತೀ ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು, ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪ್ರತಿಷ್ಠಾನದ ಬೆಂಗಳೂರು ವಲಯ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಎನ್. ಆಚಾರ್ಯ, ಪ್ರತಿಷ್ಠಾನದ ಪ್ರಥಮ ವಿಶ್ವಸ್ಥರಾದ ಕಾಳಿಕಾಂಬಾ ದೇವಸ್ಥಾನಗಳ ಧರ್ಮದರ್ಶಿಗಳಾದ ಕೆ. ಕೇಶವ ಆಚಾರ್ಯ ಮಂಗಳೂರು, ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು ಕಾರ್ಕಳ, ಗಜಾನನ ಆರ್. ಆಚಾರ್ಯ ಭಟ್ಕಳ, ಬಿ.ಎಂ.ಯದುನಂದನ ಆಚಾರ್ಯ ಬಂಗ್ರ ಮಂಜೇಶ್ವರ, ಕೆ. ಸುಧಾಕರ ಆಚಾರ್ಯ ಕೊಲಕಾಡಿ, ಪುರೋಹಿತ್ ಜಯಕರ ಆಚಾರ್ಯ ಮೂಡುಬಿದಿರೆ, ಕೆ. ಸುಂದರ ಆಚಾರ್ಯ ಕೋಟೆಕಾರು, ಜನಾರ್ದನ ಆಚಾರ್ಯ ಆರಿಕ್ಕಾಡಿ, ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು, ಬಿ. ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಕೆ.ಎಂ.ಗಂಗಾಧರ ಆಚಾರ್ಯ ಕೊಂಡೆವೂರು, ಗೀತಾಚಂದ್ರ ಕಾರ್ಕಳ, ಸುರೇಶ್ ಆಚಾರ್ಯ ನಿಟ್ಟೆ ಕಾರ್ಕಳ ನಿರೂಪಿಸಿದರು. ಕೋಶಾಧಿಕಾರಿ ಅರವಿಂದ ಆಚಾರ್ಯ ಬೆಳುವಾಯಿ ವಂದಿಸಿದರು.















































































error: Content is protected !!
Scroll to Top