ಬೆನ್ನುಬೆನ್ನಿಗೆ ಎರಡು ಬಂದ್‌ಗಳಿಂದ ಗೊಂದಲ
ಬೆಂಗಳೂರು: ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಹರಿಸುವುದನ್ನು ಪ್ರತಿಭಟಿಸಿ ಬೆಂಗಳೂರು ಬಂದ್ ಮಾಡಿದ ನಾಲ್ಕೇ ದಿನದಲ್ಲಿ ಇನ್ನೊಂದು ಬಂದ್‌ಗೆ ರಾಜ್ಯ ಸಾಕ್ಷಿಯಾಗಲಿದೆ. ಸೆ.29ರಂದು ರಾಜ್ಯ ಬಂದ್‌ಗೆ ಕನ್ನಡ ಸಂಘಟನೆಗಳು ಕರೆ ನೀಡಿವೆ.
ಬೆನ್ನುಬೆನ್ನಿಗೆ ಎರಡು ಬಂದ್ ನಡೆಸುವು ಕುರಿತಾಗಿ ಗೊಂದಲಗಳಿದ್ದರೂ ಶುಕ್ರವಾರದ ಬಂದ್ ಹಿಂದೆಗೆದುಕೊಳ್ಳುವುದಿಲ್ಲ ಎಂದು ಕನ್ನಡ ಸಂಘಟನೆಗಳು ಪಟ್ಟು ಹಿಡಿದಿವೆ.
ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆಯಿಂದ ತೀವ್ರ ಬರಗಾಲ ಉಂಟಾಗಿದ್ದು, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದೆ. ಹೀಗಿದ್ದರೂ ತಮಿಳುನಾಡು ತನ್ನ ಪಾಲಿನ ನೀರು ನೀಡಲೇಬೇಕೆಂದು ಪಟ್ಟುಹಿಡಿದು ಸುಪ್ರೀಂ ಕೋರ್ಟ್ ತನಕ ಹೋಗಿ ನೀರು ಹರಿಸಿಕೊಂಡಿದೆ.
ರಾಜ್ಯ ಸರಕಾರ ಕೂಡ ನಿರಂತರವಾಗಿ ನೀರು ಹರಿಸುತ್ತಿದ್ದು, ಇದು ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದೆ. ಹಿರಿಯ ಚಳವಳಿಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸೆ.29ರ ಕರ್ನಾಟಕ ಬಂದ್ ನಡೆಯಲಿದ್ದು, ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ನಿನ್ನೆ ದಿಲ್ಲಿಯಲ್ಲಿ ಕಾವೇರಿ ನೀರು ನಿಯಂತ್ರಣಾ ಸಮಿತಿ ತಮಿಳುನಾಡಿಗೆ ಮತ್ತೆ 18 ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿದೆ. ಸೆ.28ರಿಂದ ಅಕ್ಟೋಬರ್ 15ರವರೆಗೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚಿಸಿದೆ. ಇದರಿಂದ ರೈತರು ಮತ್ತಷ್ಟು ಆಕ್ರೋಶಗೊಂಡಿದ್ದು ಪ್ರತಿಭಟನೆ ಮುಂದುವರಿಸಿದ್ದಾರೆ.
ಇಂದು ಬಿಜೆಪಿ, ಜೆಡಿಎಸ್ ಪ್ರತಿಭಟನೆ
ಈ ನಡುವೆ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆ ನಡೆಸಲಿವೆ. ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಚ್.ಡಿ ಕುಮಾರಸ್ವಾಮಿ, ಸದಾನಂದಗೌಡ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಮಂಡ್ಯ, ರಾಮನಗರ, ಮೈಸೂರು ಸೇರಿದಂತೆ ಅನೇಕ ಕಡೆ ಪ್ರತಿಭಟನೆ ಮುಂದುವರಿಯುತ್ತಿದೆ.
ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ
ಕನ್ನಡಪರ ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕಲು ತಯಾರಿ ನಡೆದಿದೆ. ನಿನ್ನೆ ಧರಣಿ ನಿರತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೋರಾಟವನ್ನು ಹತ್ತಿಕ್ಕುವ ಪೊಲೀಸ್ ನಡೆ ಖಂಡಿಸಿ ಇಂದು ಪ್ರತಿಭಟನೆ ನಡೆಯಲಿದೆ.
ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ ರೈತ ಸಂಘಟನೆಯವರು ಬೆಂಗಳೂರು ಬಂದ್ ನಿರ್ಧಾರವನ್ನು ಆತುರದಿಂದ ತೆಗೆದುಕೊಂಡಿದ್ದರಿಂದ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ನಾವು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕ್ತೀವಿ. ನಮ್ಮ ಕಾವೇರಿ ಹೋರಾಟ ಮುಂದುವರಿಯುತ್ತದೆ. ಕರ್ನಾಟಕ ಬಂದ್ ಹಿಂತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.