ದೇಶವ್ಯಾಪಿ ಆಘಾತದ ಅಲೆಯೆಬ್ಬಿಸಿದ ಮಾಜಿ ಸಚಿವೆಯ ವೀಡಿಯೊ
ಹೊಸದಿಲ್ಲಿ : ಇಸ್ಕಾನ್ ಬಹುದೊಡ್ಡ ವಂಚಕ ಸಂಸ್ಥೆ, ಅದು ತನ್ನ ಗೋಶಾಲೆಗಳಲ್ಲಿರುವ ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ ಎಂಬುದಾಗಿ ಬಿಜೆಪಿ ನಾಯಕಿ, ಮಾಜಿ ಸಚಿವೆ ಮನೇಕಾ ಗಾಂಧಿ ಹೇಳಿರುವ ವೀಡಿಯೋ ವೈರಲ್ ಆಗಿ ಆಘಾತದ ಅಲೆಯೆಬ್ಬಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಅಸಂಖ್ಯಾತ ಬಾರಿ ಶೇರ್ ಆಗಿರುವ ವೀಡಿಯೋದಲ್ಲಿ ಮನೇಕಾ ಗಾಂಧಿ ಇಸ್ಕಾನ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಇಸ್ಕಾನ್ ಗೋಶಾಲೆಗಳನ್ನು ಸ್ಥಾಪಿಸಿ ಸರಕಾರದಿಂದ ಭೂಮಿ ಮತ್ತು ಅನುದಾನ ಪಡೆಯುತ್ತದೆ. ಬಳಿಕ ಈ ಗೋಶಾಲೆಗಳಲ್ಲಿರುವ ಗೋವುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿದೆ ಎಂದು ಮನೇಕಾ ಹೇಳಿದ್ದಾರೆ.
ಇತ್ತೀಚೆಗೆ ನಾನು ಆಂಧ್ರ ಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್ ಗೋಶಾಲೆಗೆ ಭೇಟಿ ನೀಡಿದಾಗ ಅಚ್ಚರಿಯಾಯಿತು. ಅಲ್ಲಿ ಒಂದೇ ಒಂದು ಆರೋಗ್ಯಕರವಾದ ಗೋವು ಇರಲಿಲ್ಲ. ಕರುಗಳೂ ಇರಲಿಲ್ಲ. ಇದರ ಅರ್ಥ ಅವರು ಕರುಗಳನ್ನು ಮಾರಿದ್ದಾರೆ ಎಂದು. ಕಸಾಯಿಖಾನೆಗಳಿಗೆ ಗೋವುಗಳನ್ನು ಮಾರಾಟ ಮಾಡುವುದು ಇಸ್ಕಾನ್‌ನ ದೊಡ್ಡ ದಂಧೆ. ಬೀದಿಗಳಲ್ಲಿ ಹರೇ ರಾಮ ಹರೇ ಕೃಷ್ಣ ಮಂತ್ರ ಜಪಿಸುವವರೇ ಇಂಥ ಕೃತ್ಯ ಎಸಗುತ್ತಿರುವು ಆಘಾತಕಾರಿ. ಅವರ ಇಡೀ ಬದುಕು ಹಾಲಿನ ಮೇಲೆ ಅವಲಂಬಿಸಿದೆ. ಆದರೆ ಅವರು ಹೀಗೆ ಮಾಡುತ್ತಿದ್ದಾರೆ ಎಂದು ಮನೇಕಾ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇದೇ ವೇಳೆ ಇಸ್ಕಾನ್ ಮನೇಕಾ ಗಾಂಧಿಯ ಆರೋಪಗಳನ್ನು ಆಧಾರ ರಹಿತ ಸುಳ್ಳಿನ ಕಂತೆ ಎಂದು ಹೇಳಿ ತಿರಸ್ಕರಿಸಿದೆ. ಗೋಮಾಂಸ ಮುಖ್ಯ ಆಹಾರವಾಗಿರುವ ದೇಶಗಳಲ್ಲೇ ಇಸ್ಕಾನ್ ಗೋ ಸಂರಕ್ಷಣೆಗಾಗಿ ಅನೇಕ ಕಾರ್ಯಗಳನ್ನು ಮಾಡಿದೆ. ಹೀಗಿರುವಾಗ ಮಾಜಿ ಸಚಿವೆ ಮಾಡಿರುವ ಆರೋಪ ಆಶ್ಚರ್ಯವುಂಟು ಮಾಡುತ್ತಿದೆ ಎಂದು ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುದಿಷ್ಠಿರ ಗೋವಿಂದ ದಾಸ್ ಹೇಳಿದ್ದಾರೆ.