ಕಗ್ಗದ ಸಂದೇಶ-ಬದುಕು ನಡೆಗೆ ವಿಧಿಯೇ ಸೂತ್ರಧಾರ…

ಅರಸನೊಬ್ಬನಲ್ಲ; ಮೂವರು ಬಾಳನಾಳುವರು|
ಕರಕರುಮ ದೈವಗಳು ತೊಡಕದಕೆ ಸಾಜ||
ಗುರಿಯಿಡದ ಮೊದಲು ಕೊನೆಯಿರದ ದರಬಾರಿನಲಿ|
ಸರಿಯೇನೋ ತಪ್ಪೇನೋ–ಮಂಕುತಿಮ್ಮ||

ನಮ್ಮ ಬಾಳನ್ನು ನಾವು, ನಮ್ಮ ಪೂರ್ವ ಕರ್ಮ ಮತ್ತು ದೈವ ಹೀಗೆ ಮೂವರು ಅರಸರು ಆಳ್ವಿಕೆ ಮಾಡುವುದರಿಂದ ಸಮಸ್ಯೆಗಳು ಉಂಟಾಗುವುದು ಸಹಜ. ಒಂದು ನಿರ್ದಿಷ್ಟ ಗುರಿ, ಒಂದು ಆರಂಭ ಮತ್ತು ಕೊನೆಯಿರದ ಈ ಆಡಳಿತದಲ್ಲಿ ಯಾವುದು ಸರಿ ಹಾಗು ಯಾವುದು ತಪ್ಪು ಎಂದು ಹೇಳುವುದು ಅಷ್ಟು ಸುಲಭವಲ್ಲ ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ದೈವದ ಹಾಗೂ ಪೂರ್ವ ಕರ್ಮದ ಪ್ರಭಾವವಿರುವುದರಿಂದ ಜೀವನದಲ್ಲಿ ನಾವು ಎಣಿಸಿದ ಹಾಗೆಐೇ ಯಾವುದೂ ನಡೆಯುವುದಿಲ್ಲ. ದೇಹಕ್ಕಿಂತ ಮುಖ್ಯವಾಗಿರುವ ಆತ್ಮಕ್ಕೆ ಜನ್ಮ ಜನ್ಮಾಂತರದ ಹಿನ್ನೆಲೆ ಇರುವುದರಿಂದ ಹಿಂದಿನ ಜನ್ಮಗಳ ಕರ್ಮ ಫಲವನ್ನು ಈ ಜನ್ಮದಲ್ಲಿ ಅನುಭವಿಸಬೇಕಾಗಬಹುದು. ಈ ಫಲದ ಬಗೆ ಹೇಗೆ? ಏನು? ಯಾವಾಗ? ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಲಾಗದು. ‘ನಾವೊಂದು ಬಗೆದರೆ ದೈವ ಇನ್ನೊಂದು ಬಗೆಯುತ್ತದೆ’ ಎನ್ನುವಂತೆ ದೈವದ ಎಣಿಕೆಯೇನು? ಎನ್ನುವುದನ್ನು ನಿಖಿರವಾಗಿ ನಿರ್ಣಯಿಸಲು ಸಾಧ್ಯವಿಲ್ಲ. ಇನ್ನು ಈ ದೇಹದ ಹುಟ್ಟು ಯಾವಾಗ ಆಯಿತು ಎಂದು ಹೇಳಬಹುದೇ ಹೊರತು ಆತ್ಮದ ಬಗ್ಗೆ ಹೇಳಲು ಸಾಧ್ಯವಿಲ್ಲ. ಅದರ ಆದಿ ಮತ್ತು ಅಂತ್ಯ ಹಾಗೂ ನಿರ್ದಿಷ್ಟ ಗುರಿಯನ್ನು ಊಹಿಸಲಾಗದು. ಜೀವನವನ್ನು ಬಂದ ಹಾಗೆ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.

ಬದುಕೊಂದು ನಾಟಕವು ವಿಧಿಯು ನಿರ್ದೇಶಕನು|
ಅದರ ದೃಶ್ಯಗಳೆಲ್ಲ ಕರ್ಮಫಲವು||
ಪದಪಿಂದ ನೀನರಿತು ಅಯಾಯ ಪಾತ್ರಗಳ|
ಹದವರಿತು‌ ಅಭಿನಯಿಸು–ಬೋಳುಬಸವ||

ಅಂದರೆ ಬದುಕು ನಾವು ಎಣಿಸಿದ ಹಾಗೆ ಅಲ್ಲ ವಿಧಿಯ ನಿರ್ದೇಶನದಂತೆ‌ ನಡೆಯುವುದು. ಅವನ ಅಂತರಂಗವನ್ನು ಅರಿಯಲು ಯಾರಿಗೂ ಸಾದ್ಯವಾಗದು. ಇದರೊಂದಿಗೆ ಕರ್ಮದ ಫಲದ ಬಗ್ಗೆಯೂ ಪೂರ್ಣ ತಿಳಿವಳಿಕೆ ಇಲ್ಲದಿರುವುದರಿಂದ ತೊಡಕುಂಟಾಗುವುದು ಸಹಜ. ಅನೇಕ ಸಂದರ್ಭದಲ್ಲಿ ನಾವು ಸರಿಯೆಂದು ಭಾವಿಸಿದ್ದು ತಪ್ಪಾಗಿರುವುದಲ್ಲದೆ ತಪ್ಪೆಂದು ಎಣಿಸಿದ್ದು ಸರಿಯೆನಿಸುತ್ತದೆ. ಬದುಕಿನಲ್ಲಿ ತಪ್ಪುಒಪ್ಪುಗಳ ಬಗ್ಗೆ‌ ಅತಿಯಾಗಿ ತಲೆ ಕೆಡಿಸಿಕೊಳ್ಳದೆ ಪ್ರಜ್ಞಾವಂತಿಕೆಯಿಂದ ಆತ್ಮ ಒಪ್ಪುವ ಕಾರ್ಯಗಳನ್ನು ಮಾಡುತ್ತಾ ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?error: Content is protected !!
Scroll to Top