ಚೈತ್ರಾ ಕುಂದಾಪುರ ಕಾರು ಮುಧೋಳದಲ್ಲಿ ಪತ್ತೆ

ಕೃತ್ಯಕ್ಕೆ ಸಾಲುಮರದ ತಿಮ್ಮಕ್ಕನ ಕಾರು ಕೂಡ ಬಳಸಿದ ಆರೋಪ

ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬೈಂದೂರಿನ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 7 ಕೋಟಿ ವಂಚಿಸಿರುವ ಚೈತ್ರಾ ಕುಂದಾಪುರ ಇತ್ತೀಚಿಗೆ ಖರೀದಿಸಿದ್ದ ಹೊಸ ಕಿಯಾ ಕೇರೆನ್ಸ್ ಕಾರು, ಮನೆ, ಸೈಟು ಹಾಗೂ ಎರಡು ಕೋಟಿ ರೂಪಾಯಿ ಎಫ್‌ಡಿ ಹಣವನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಕಾರನ್ನು ಸಿಸಿಬಿ ಪೊಲೀಸರು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಚೈತ್ರಾ ಬ್ಯಾಂಕ್‌ನಲ್ಲಿಟ್ಟಿದ್ದ ಹಣ, ಖರೀದಿ ಮಾಡಿದ್ದ ಚಿನ್ನಾಭರಣವನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೊಲ್ಲಾಪುರದ ಒಂದು ಬಾರ್ ಮುಂದೆ ನಿಲ್ಲಿಸಿದ್ದ ಚೈತ್ರಾ ಕಾರನ್ನು ಆಕೆಯ ಸ್ನೇಹಿತ ಎಂದು ಹೇಳಲಾಗುವ ಕಿರಣ್‌ ಎಂಬಾತ ಸೆ.9ರಂದು ಮುಧೋಳಕ್ಕೆ ತಂದಿದ್ದ. ಕಿರಣ್ ಸೊಲ್ಲಾಪುರಕ್ಕೆ ಹೋಗಿ ಕಿಯಾ ಕಾರು ತಂದು ತನ್ನ ಡ್ರೈವಿಂಗ್ ಸ್ಕೂಲ್‍ನಲ್ಲಿಟ್ಟುಕೊಂಡಿದ್ದ. ಚೈತ್ರಾ ಕುಂದಾಪುರ, ಪಿಎ ಶ್ರೀಕಾಂತ್, ಕಿರಣ್ ಕರೆಯನ್ನು ಸಿಸಿಬಿ ಪೊಲೀಸರು ಟ್ರೇಸ್‌ ಮಾಡಿದ್ದಾಗ ಕಾರು ಮುಧೀಳದಲ್ಲಿರುವ ಸುಳಿವು ಸಿಕ್ಕಿದೆ. ಕಿರಣ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಈ ನಡುವೆ ಸಾಲುಮರದ ತಿಮ್ಮಕ್ಕ ಅವರ ಹೆಸರು ಕೂಡ ಈ ಪ್ರಕರಣದಲ್ಲಿ ನುಸುಳಿ ಬಂದಿದೆ. ಸಾಲುಮರದ ತಿಮ್ಮಕ್ಕಗೆ ನೀಡಿದ ಸಚಿವ ದರ್ಜೆ ಸ್ಥಾನಮಾನವನ್ನು ಚೈತ್ರಾ ದುರ್ಬಳಕೆ ಮಾಡಿಕೊಂಡಿದ್ದಾಳೆಂಬ ಆರೋಪ ಕೇಳಿ ಬಂದಿದೆ.
ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯನ ಪಾತ್ರ ಮಾಡಿದ್ದ ಚನ್ನಾ ನಾಯ್ಕ ಬಳಸಿದ್ದ ಕಾರು ಸಾಲುಮರದ ತಿಮ್ಮಕ್ಕನ ಸಾಕುಮಗನಿಗೆ ಸೇರಿದ್ದು ಎಂದು ಹೇಳಲಾಗಿದೆ. ಕುಮಾರಕೃಪಾ ಗೆಸ್ಟ್‌ ಹೌಸ್‌ಗೆ ಪ್ರವೇಶಿಸಲು ಈ ಕಾರು ಬಳಸಲಾಗಿದೆ ಹಾಗೂ ಗೋವಿಂದ ಬಾಬು ಪೂಜಾರಿಯನ್ನು ನಂಬಿಸಲು ಈ ಕೆಲಸ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಸ್ಪಷ್ಟೀಕರಣ ಕೊಟ್ಟಿರುವ ಸಾಕುಮಗ ಉಮೇಶ್‌, ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಗಗನ್‌ ಕಡೂರು ಮತ್ತು ನಮಗೆ ಯಾವುದೇ ಸಂಬಂಧವಿಲ್ಲ. ನಾವು ಗಿಡ ನೆಡುತ್ತಾ ಹೇಗೋ ಜೀವನ ನಡೆಸುತ್ತಿದ್ದೇವೆ. ಸರಕಾರಕ್ಕೆ ಹೆದರಿ ಬದುಕುವ ಜನ ನಾವು ಎಂದು ಹೇಳಿದ್ದಾರೆ.
ನಾನು ಗಗನ್‌ ಕಡೂರು ಮದುವೆಗೆ ಹೋಗಿದ್ದು ನಿಜ. ಆತ ಭಾರತೀಯ ಅಯ್ಯಪ್ಪ ಸೇವಾ ಸಮಿತಿ ಸದಸ್ಯನಾಗಿದ್ದು, ನಾನು ಅದರ ಅಧ್ಯಕ್ಷ. ವಿಧಾನಸೌಧದ ಕೊಠಡಿಯನ್ನು ನವೀಕರಿಸುವಾಗ ಗಗನ್‌, ತಿಮ್ಮಕ್ಕ ಅವರ ಕಾರು ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ದೇಶದಲ್ಲಿ ತಿಮ್ಮಕ್ಕ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಹೀಗಾಗಿ ಅವರೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಾರೆ, ಮದುವೆಗೆ ಕರೆಯುತ್ತಾರೆ. ಪ್ರೀತಿಯಿಂದ ಕರೆದಾಗ ಹೋಗಬೇಕಾಗುತ್ತದೆ. ಅದೇ ರೀತಿ ಗಗನ್‌ ಮದುವೆಗೂ ಹೋಗಿದ್ದೇವೆ ಅಷ್ಟೆ. ಪ್ರಕರಣದಲ್ಲಿ ನಮ್ಮ ಹೆಸರು ಪ್ರಸ್ತಾವಿಸಿರುವುದು ತಪ್ಪು ಎಂದು ಹೇಳಿದರು.error: Content is protected !!
Scroll to Top