ಅಕ್ರಮ ಹಣ ವರ್ಗಾವಣೆ ವ್ಯವಹಾರದ ತನಿಖೆ ನಡೆಸಲು ಆಗ್ರಹ
ಉಡುಪಿ: ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಪ್ರಕರಣ ಹೊಸ ಹೊಸ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಬೆಂಗಳೂರು ಸಿಸಿಬಿ ಪೊಲೀಸರಿಂದ ಸೆರೆಯಾಗಿರುವ ಚೈತ್ರಾ ಇದೀಗ ಈ ಪ್ರಕರಣದ ದೂರುದಾರರಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ವಿರುದ್ಧವೇ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾಳೆ.
ಗೋವಿಂದ ಬಾಬು ಪೂಜಾರಿ ಐದು ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರಾ ಕುಂದಾಪುರ ಜಾರಿ ನಿರ್ದೇಶನಾಲಯಕ್ಕೆ (ED) ಪತ್ರ ಬರೆದು ಈ ಅಕ್ರಮ ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾಳೆ. 5 ಕೋಟಿ ರೂ. ಹಣದ ಬಗ್ಗೆ ಗೋವಿಂದ ಬಾಬು ಪೂಜಾರಿ ಆಪ್ತನೇ ನನಗೆ ಮಾಹಿತಿ ನೀಡಿದ್ದಾನೆ. ಹಣ ನೀಡಿದ ಬಗ್ಗೆ ನನ್ನ ಜೊತೆಯೂ ಗೋವಿಂದ ಬಾಬು ಚರ್ಚಿಸಿದ್ದಾರೆ. ಚುನಾವಣಾ ಟಿಕೆಟ್ಗಾಗಿ ಹಣ ವರ್ಗಾಯಿಸಿದ್ದಾರೆ. ಮಂಜುನಾಥ್ಗೆ 1 ಕೋಟಿ ರೂ., ಅಭಿನವ ಹಾಲಶ್ರೀ ಸ್ವಾಮೀಜಿಗೆ 1.5 ಕೋಟಿ ರೂ. ವಿಶ್ವನಾಥ್‌ಜೀಗೆ 3 ಕೋಟಿ ರೂ. ಹಣ ನೀಡಿದ್ದಾಗಿ ಗೋವಿಂದಬಾಬು ನನಗೆ ಹೇಳಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿ ಎಂದು ನಾನು, ಗೋವಿಂದಬಾಬುಗೆ ಹೇಳಿದ್ದೆ ಎಂದು ಚೈತ್ರಾ ಜಾರಿ ನಿರ್ದೇಶನಾಲಯಕ್ಕೆ ಬರೆದ ಪತ್ರದಲ್ಲಿ ಹೇಳಿದ್ದಾಳೆ.
ವೃತ್ತಿಯಲ್ಲಿ ಪತ್ರಕರ್ತೆಯಾಗಿರುವ ನನಗೆ ಚುನಾವಣೆ ಸಂದರ್ಭದಲ್ಲಿ ನಡೆಯುವ ಹಣದ ವಹಿವಾಟುಗಳ ಕುರಿತು ರಹಸ್ಯ ವರದಿ ಮಾಡುವ ಆಸಕ್ತಿ ಹಿಂದಿನಿಂದಲೂ ಇತ್ತು. ಹೀಗಾಗಿ ಗೋವಿಂದ ಬಾಬು ಪೂಜಾರಿಯವರು ಟಿಕೆಟ್ಗಾಗಿ ಹೇಗೆ ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿ ಸಂಗ್ರಹಿಸಲು ಅವರೊಂದಿಗೆ ಮತ್ತು ಅವರ ಆಪ್ತನಾಗಿದ್ದ ಪ್ರಸಾದ್ ಪೂಜಾರಿಯೊಂದಿಗೆ ಆಗಾಗ ಕರೆ ಮಾಡುತ್ತಾ ಮಾಹಿತಿ ಸಂಗ್ರಹಿಸುತ್ತಿದ್ದೆ.
ಒಂದೊಮ್ಮೆ ಗೋವಿಂದ ಪೂಜಾರಿಯವರು ಹಣ ನೀಡಿ ಅಕ್ರಮ ಮಾರ್ಗದಿಂದ ಟಿಕೆಟ್ ಪಡೆಯುವ ಪ್ರಯತ್ನ ಮಾಡಿದಲ್ಲಿ ಅದನ್ನು ಕಾನೂನು ಮೂಲಕ ದೂರು ನೀಡಿ ತಡೆಯುವ ಮತ್ತು ಅದರ ಕುರಿತು ವರದಿ ಮಾಡುವ ಉದ್ದೇಶದಿಂದ ನಾನು ಅವರು ಟಿಕೆಟ್ಗಾಗಿ ಸಂಪರ್ಕದಲ್ಲಿದ್ದವರೊಂದಿಗೆ ಹಾಗೂ ಅವರ ಆಪ್ತ ಬಳಗದ ಬಹುತೇಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿದ್ದೆ. ಆದರೆ ಇವರು ಹಣ ನೀಡುವ ಅಥವಾ ಹಣದ ಮಾತುಕತೆಯಾಗುವ ಮತ್ತು ಯಾರೊಂದಿಗೆ, ಯಾವಾಗ, ಎಲ್ಲಿ ಹಣದ ವಿನಿಮಯ ನಡೆಯುತ್ತದೆ ಎನ್ನುವ ಯಾವುದೇ ಮಾಹಿತಿ ನನಗೆ ನೀಡದೆ ಇದ್ದ ಕಾರಣ ನನಗೆ ಇವರ ವ್ಯವಹಾರವನ್ನು ಕಾನೂನು ಮೂಲಕ ತಡೆಯಲು ಸಾಧ್ಯವಾಗಿರಲಿಲ್ಲ ಎಂದಿದ್ದಾಳೆ.
ಚುನಾವಣೆ ಮುಗಿದ ಬಳಿಕ ಗೋವಿಂದ ಬಾಬು ಪೂಜಾರಿಯವರು ತಾನು ಬಿಜೆಪಿ ಟಿಕೆಟ್ಗಾಗಿ 6 ಕೋಟಿ ರೂಪಾಯಿ ಹಣವನ್ನು ಅನಧಿಕೃತವಾಗಿ ನೀಡಿರುವ ಕುರಿತು ನನ್ನ ಬಳಿ ಹೇಳಿಕ್ಕೊಂಡಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ 11-05-2023ರಂದು ಅವರ ಅಧಿಕೃತ ಫೋನ್ ಸಂಖ್ಯೆಯಿಂದ ನನಗೆ ಕರೆ ಮಾಡಿ ತಾನು ಮಂಜುನಾಥ್ ಎನ್ನುವವರಿಗೆ 1 ಕೋಟಿ ರೂಪಾಯಿಯನ್ನು, ಅಭಿನವ ಹಾಲಾಶ್ರೀ ಸ್ವಾಮೀಜಿ ಅವರಿಗೆ 1.5 ಕೋಟಿ ರೂಪಾಯಿಯನ್ನು ಹಾಗೂ ವಿಶ್ವನಾಥ್‌ಜೀ ಎನ್ನುವವರಿಗೆ 3 ಕೋಟಿ ರೂಪಾಯಿಯನ್ನೂ ನೀಡಿರುವುದಾಗಿ ನನ್ನೊಂದಿಗೆ ಚರ್ಚೆ ನಡೆಸಿರುತ್ತಾರೆ. ಈ ಕುರಿತು ತಾವು ಹಣ ನೀಡಿರುವುದನ್ನು ಸ್ವತಃ ಗೋವಿಂದ ಬಾಬು ಪೂಜಾರಿಯವರೇ ನನ್ನ ಬಳಿ ಹೇಳಿಕೊಂಡು, ಒಪ್ಪಿಕೊಂಡಿರುತ್ತಾರೆ. ಈ ಕುರಿತು ಅವರು ಮಾತನಾಡಿರುವ ಕರೆಯ ರೆಕಾರ್ಡ್ ಗಳನ್ನು ಇದೆ. ರೆಕಾರ್ಡ್ ನಲ್ಲಿ 3 ಕೋಟಿ 50 ಲಕ್ಷ ಕೊಟ್ಟಿರುವ ಕುರಿತು ಅವರ ಮಾತುಗಳಲ್ಲೇ ಉಲ್ಲೇಖಿಸಿದ್ದಾರೆ. ಮತ್ತು ಸ್ವಾಮೀಜಿಯವರಿಗೆ ಹಣ ಕೊಟ್ಟಿರುವ ಬಗ್ಗೆಯೂ ಒಪ್ಪಿಕೊಂಡಿದ್ದಾರೆ ಎಂದು ಸುದೀರ್ಘವಾದ ಪತ್ರ ಬರೆದಿದ್ದಾಳೆ.