ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ, ಶೋಧ ಕಾರ್ಯಾಚರಣೆ

ಐಸಿಸ್‌ ಉಗ್ರರಿಗಾಗಿ ತಮಿಳುನಾಡಿನಲ್ಲಿ ಹುಡುಕಾಟ

ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಬೆಳ್ಳಂಬೆಳಗ್ಗೆ ಇನ್ನೊಂದು ಸುತ್ತಿನ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ತಮಿಳುನಾಡಿನ ಕೊಯಮತ್ತೂರಿನ 22 ಸ್ಥಳಗಳು, ಚೆನ್ನೈನ ಮೂರು ಸ್ಥಳಗಳು ಮತ್ತು ಹೈದರಾಬಾದ್‌ನ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಐಸಿಸ್ ಉಗ್ರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
2022ರ ಅಕ್ಟೋಬರ್ 23ರಂದು ಕೊಯಮತ್ತೂರಿನ ಉಕ್ಕಡಮ್‌ನಲ್ಲಿರುವ ಈಶ್ವರನ್ ಕೋವಿಲ್ ಸ್ಟ್ರೀಟ್‌ನಲ್ಲಿರುವ ಕೊಟ್ಟೈ ಸಂಗಮೇಶ್ವರರ್ ದೇವಸ್ಥಾನದ ಮುಂಭಾಗದಲ್ಲಿ ಸ್ಫೋಟ ನಡೆದಿತ್ತು. ಈ ವೇಳೆ ಸುಧಾರಿತ ಸ್ಫೋಟಕ ಸಾಧನದೊಂದಿಗೆ ಕಾರನ್ನು ಓಡಿಸಿದ ಐಸಿಸ್ ಅನುಯಾಯಿ ಜಮೇಶಾ ಮುಬೀನ್ ಮೃತಪಟ್ಟಿದ್ದ. ತನಿಖೆಯಿಂದ ಅವನು ಕೊಯಮತ್ತೂರಿನ ಕುನಿಯಮುತ್ತೂರಿನಲ್ಲಿ ಕೋವೈ ಅರೇಬಿಕ್‌ ಕಾಲೇಜಿನಲ್ಲಿ ಓದುತ್ತಿದ್ದದ್ದು ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ 6 ಗಂಟೆಗೆ ಕೊಯಮತ್ತೂರು ನಗರದ ಕರುಂಬುಕ್ಕಡೈ, ಜಿಎಂ ನಗರ, ಕಿನಾತುಕಡವು, ಕವುಂಡಂಪಾಳ್ಯಂ, ಉಕ್ಕಡಂ ಮತ್ತು ಇನ್ನೂ ಕೆಲವು ಪ್ರದೇಶಗಳು ಸೇರಿ 22 ಸ್ಥಳಗಳಲ್ಲಿ ಶೋಧ ಆರಂಭಿಸಿದೆ. ತಮಿಳುನಾಡು ರಾಜಧಾನಿ ಚೆನ್ನೈನ ನೀಲಂಕಾರೈ, ಅಯನವರಂ ಮತ್ತು ತಿರುವಿ ಕಾ ನಗರ್‌ನಲ್ಲಿಯೂ ಹುಡುಕಾಟ ಆರಂಭಿಸಿದ್ದಾರೆ.
ಕೊಯಮತ್ತೂರು ನಗರದ ಪೆರುಮಾಳ್ ಕೋವಿಲ್ ಸ್ಟ್ರೀಟ್‌ನಲ್ಲಿರುವ ಕೊಯಮತ್ತೂರು ಕಾರ್ಪೊರೇಷನ್‌ನ ಡಿಎಂಕೆ ಕೌನ್ಸಿಲರ್ ಎಂ. ಮುಬಸೀರಾ ನಿವಾಸದಲ್ಲಿ ಎನ್‌ಐಎ ಅಧಿಕಾರಿಗಳ ತಂಡ ಶೋಧ ನಡೆಸುತ್ತಿದೆ. ಈ ಕೌನ್ಸಿಲರ್‌ನ ಪತಿ ಅರೇಬಿಕ್ ಕಾಲೇಜಿನಲ್ಲಿ ಓದುತ್ತಿದ್ದರು ಎಂದೂ ಮೂಲಗಳು ತಿಳಿಸಿವೆ.

error: Content is protected !!
Scroll to Top