ನಕಲಿ ಚಿನ್ನ ಅಡವಿಟ್ಟು ವಂಚಿಸಿದ ಪ್ರಕರಣ : ತನ್ನ ಪಾತ್ರ ನಿರಾಕರಿಸಿದ ಬಿಜೆಪಿ ಮುಖಂಡ

ಬ್ಯಾಂಕಿನ ಅಧ್ಯಕ್ಷ, ಕಾರ್ಯದರ್ಶಿಯಿಂದ ಮಾನಹಾನಿ ಎಂದು ಆರೋಪ

ಉಡುಪಿ: ಉಡುಪಿಯ ಆದರ್ಶ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘಕ್ಕೆ ನಕಲಿ ಚಿನ್ನ ಅಡವಿಟ್ಟು 20.62 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿಯ ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾಧ್ಯಕ್ಷ ದಾವೂದ್‌ ಅಬೂಬಕ್ಕರ್‌ ಸ್ಪಷ್ಟಪಡಿಸಿದ್ದಾರೆ.
ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಮಾನಹಾನಿ ಮಾಡಿದ್ದು ಮಾತ್ರವಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಜಿಲ್ಲಾ ಎಸ್‌ಪಿಗೆ ದೂರು ಸಲ್ಲಿಸಿದ್ದೇನೆ ಎಂದವರು ತಿಳಿಸಿದ್ದಾರೆ.
ಇತ್ತೀಚೆಗೆ ಉಡುಪಿಯ ಆದರ್ಶ ಸಹಕಾರಿ ಬ್ಯಾಂಕಿಗೆ ವ್ಯಕ್ತಿಯೊಬ್ಬರು ಹಂತ ಹಂತವಾಗಿ ನಕಲಿ ಚಿನ್ನ ಅಡವಿಟ್ಟು 20.62 ಲಕ್ಷ ರೂ. ಸಾಲ ಪಡೆದು ವಂಚಿಸಿರುವ ಕುರಿತು ದೂರು ದಾಖಲಾಗಿತ್ತು.
ಕೆಲ ದಿನಗಳ ಹಿಂದೆ ಆ ವ್ಯಕ್ತಿ ಬ್ಯಾಂಕಿಗೆ ಅಡವಿಡಲು ತಂದ ಚಿನ್ನವನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ಪತ್ತೆಯಾಗಿತ್ತು. ಇದು ಗೊತ್ತಾಗುತ್ತಲೇ ಆ ವ್ಯಕ್ತಿ ಕಾರನ್ನು ಬ್ಯಾಂಕಿನ ಎದುರು ಬಿಟ್ಟ ಪಲಾಯನ ಮಾಡಿದ್ದ. ಆದರೆ ಈ ಕಾರು ದಾವೂದ್‌ ಅಬೂಬಕ್ಕರ್‌ ಹೆಸರಲ್ಲಿದ್ದ ಕಾರಣ ಅವರ ವಿರುದ್ಧ ಬ್ಯಾಂಕಿನವರು ದೂರು ದಾಖಲಿಸಿದ್ದರು.
ಇದಕ್ಕೆ ಸ್ಪಷ್ಟೀಕರಣ ನೀಡಿರುವ ದಾವೂದ್‌ ಅಬೂಬಕ್ಕರ್‌, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಈ ಸಂಘದ ಸದಸ್ಯನೂ ಅಲ್ಲ ಮತ್ತು ಸಂಘದ ಕಚೇರಿ ಎಲ್ಲಿದೆ ಎಂಬುದೇ ನನಗೆ ತಿಳಿದಿಲ್ಲ. ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೆ.5ರಂದು ನಾನು ಬೆಂಗಳೂರಿನಲ್ಲಿದ್ದೆ. ಕಾರು ಮಾರಾಟ ಮಾಡುವ ಸಲುವಾಗಿ ಮಹಮ್ಮದ್‌ ರಿಯಾಜ್‌ ಎಂಬುವರೊಂದಿಗೆ ಮಾತನಾಡಿದ್ದೆ. ನಾನು ಬೆಂಗಳೂರಿನಲ್ಲಿದ್ದಾಗ ಅವರು ನನ್ನ ಮನೆಗೆ ಹೋಗಿ ಕಾರಿನ ಕೀ ತೆಗೆದುಕೊಂಡು ಹೋಗಿದ್ದಾರೆ. ಅನಂತರ ಏನಾಯಿತು ಎಂಬುದು ಗೊತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top