ಸ್ನೇಹಿತನ ರಕ್ಷಣೆಗೆ ಹೋಗಿ ದುರಂತ ಅಂತ್ಯ
ಮಂಗಳೂರು: ವಿಹಾರಕ್ಕೆಂದು ಬೀಚ್‌ಗೆ ಬಂದಿದ್ದ ವೈದ್ಯ ಸಮುದ್ರಪಾಲಾದ ಘಟನೆ ಉಳ್ಳಾಲ ಸೋಮೇಶ್ವರದ ರುದ್ರಪಾದೆಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂಟರ್ನ್‌ಷಿಪ್ ಮಾಡುತ್ತಿದ್ದ ಡಾ. ಆಶೀಕ್ ಗೌಡ (30) ಮುಳುಗಿ ಮೃತಪಟ್ಟವರು.
ಐವರು ಸ್ನೇಹಿತರೊಂದಿಗೆ ಉಳ್ಳಾಲ ಸೋಮೇಶ್ವರ ರುದ್ರಪಾದೆಗೆ ಸಮುದ್ರ ವಿಹಾರಕ್ಕಾಗಿ ಭಾನುವಾರ ತಡರಾತ್ರಿ ಬಂದಿದ್ದರು. ಈ ವೇಳೆ ಜತೆಗಿದ್ದ ಡಾ.ಪ್ರದೀಪ್ ಎಂಬವರು ಬಂಡೆಯ ಮೇಲಿಂದ ಜಾರಿದ್ದು,ಕೆಳಗೆ ಬಂಡೆಯ ಅಂಚನ್ನು ಹಿಡಿದು ಸಾವು ಬದುಕಿನ ಹೋರಾಟ ಮಾಡುತ್ತಿದ್ದರು. ಪ್ರದೀಪ್ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದ ಡಾ.ಆಶೀಕ್ ಗೌಡ ಕಾಲುಜಾರಿ ಸಮುದ್ರಕ್ಕೆ ಬಿದ್ದು ನೀರು ಪಾಲಾಗಿದ್ದಾರೆ. ಆದರೆ ಕಲ್ಲುಗಳ ಆಸರೆ ಪಡೆದಿದ್ದ ಡಾ. ಪ್ರದೀಪ ಮೇಲೆ ಬಂದಿದ್ದಾರೆ. ನಂತರ ಪ್ರದೀಪ್ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಒದಗಿಸಿದ್ದರು. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.