ಬಿಎಸ್ವೈ, ಎಂ.ಬಿ.ಪಾಟೀಲ್, ಈಶ್ವರಪ್ಪ ಸಹಿತ ಗಣ್ಯರಿಂದ ಮೊದಲ ಪ್ರಯಾಣ
ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ವಿಮಾನ ನಿಲ್ದಾಣ
ಶಿವಮೊಗ್ಗ: ಮಲೆನಾಡಿನ ಮೊದಲ ವಿಮಾನ ನಿಲ್ದಾಣ, ಬೆಂಗಳೂರಿನ ಬಳಿಕ ರಾಜ್ಯದಲ್ಲಿ ಅತಿ ಉದ್ದದ ರನ್ವೇ ಹೊಂದಿರುವ ನಿಲ್ದಾಣ ಎಂಬಿತ್ಯಾದಿ ಹಿರಿಮೆಗಳಿರುವ ಶಿವಮೊಗ್ಗ ವಿಮಾನ ನಿಲ್ದಾಣ ಇಂದಿನಿಂದ ಕಾರ್ಯಾರಂಭಿಸಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೊರಟ ಮೊದಲ ವಿಮಾನ ಪ್ರಯಾಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಪ್ರಯಾಣಿಸುವ ಮೂಲಕ ಅಧಿಕೃತವಾಗಿ ಇಂದು ಚಾಲನೆ ನೀಡಿದ್ದಾರೆ. ಈ ವಿಮಾನ ಶಿವಮೊಗ್ಗದಲ್ಲಿ ಬಂದಿಳಿಯುವುದರೊಂದಿಗೆ ಅಧಿಕೃತವಾಗಿ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ತೆರೆದುಕೊಳ್ಳಲಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ ಸಚಿವ ಎಂ.ಬಿ. ಪಾಟೀಲ್ ಹಾಗೂ ಮಾಜಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಶಾಸಕ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿ ಹಲವರು ಮೊದಲ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ.
ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ರಾಜ್ಯದ 9ನೇ ವಿಮಾನ ನಿಲ್ದಾಣವಾಗಿದೆ. ಕೇಂದ್ರ ಸರ್ಕಾರದ ‘ಉಡಾನ್’ ಯೋಜನೆಯಡಿ ನಿರ್ಮಾಣಗೊಂಡಿರುವ ಈ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಕಳೆದ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದರು.
ಶಿವಮೊಗ್ಗದಿಂದ 15 ಕಿ.ಮೀ. ದೂರದಲ್ಲಿರುವ ಸೋಗಾನೆಯಲ್ಲಿ, 450 ಕೋಟಿ ರೂ. ವೆಚ್ಚದಲ್ಲಿ 779 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಏರ್ಬಸ್ ಮಾದರಿಯ ವಿಮಾನಗಳೂ ಇಲ್ಲಿ ಇಳಿಯಬಹುದು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಂತರದ ಅತಿ ಉದ್ದನೆಯ ರನ್ವೇಯನ್ನು ಹೊಂದಿರುವ ವಿಮಾನ ನಿಲ್ದಾಣ ಎಂಬ ಖ್ಯಾತಿ ಇದಕ್ಕಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 4,320 ಚದರಡಿಯ ಟರ್ಮಿನಲ್ ನಿರ್ಮಿಸಲಾಗಿದ್ದು, ಒಟ್ಟಿಗೆ 200 ರಿಂದ 300 ಪ್ರಯಾಣಿಕರನ್ನು ನಿರ್ವಹಿಸಬಹುದಾಗಿದೆ






























































