ಸೆಂಥಿಲ್‌ಗೆ ತಮಿಳುನಾಡು ಕಾಂಗ್ರೆಸ್‌ ಸಾರಥ್ಯ?

ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಾಜಿ ಜಿಲ್ಲಾಧಿಕಾರಿ

ಬೆಂಗಳೂರು: ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿರುವ ವೇಳೆ ಸ್ವಯಂನಿವೃತ್ತಿ ಪಡೆದಿದ್ದ ಕರ್ನಾಟಕ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಮಿಳುನಾಡು ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಪಕ್ಷದ ಹಾಲಿ ಅಧ್ಯಕ್ಷ ಸ್ಥಾನದಲ್ಲಿರುವ ಕೆ.ಎಸ್‌.ಅಳಗಿರಿ ಅವರ ಅಧಿಕಾರಾವಧಿ ಈಗಾಗಲೇ ಪೂರ್ಣಗೊಂಡಿದೆ. ಆದರೆ ಅವರ ನಿಷ್ಠೆಯನ್ನು ಗೌರವಿಸಿ 2024ರ ಲೋಕಸಭೆ ಚುನಾವಣೆವರೆಗೂ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈ ಕಮಾಂಡ್‌ ನಿರ್ಧರಿಸಿದೆ. ನಂತರ ಸೆಂಥಿಲ್‌ ಕಾಂಗ್ರೆಸ್‌ ಸಾರಥ್ಯ ವಹಸಿಲಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕಟುಟೀಕಾಕಾರರಾಗಿರುವ ಸೆಂಥಿಲ್‌ ವೃತ್ತಿ ಸ್ವಾತಂತ್ರ್ಯ ಇಲ್ಲ ಎಂಬ ನೆಪವೊಡಿ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದಾಗ ಸಂಚಲನ ಉಂಟಾಗಿತ್ತು. ನಂತರ ಅವರು ಕಾಂಗ್ರೆಸ್‌ ಸೇರಿದ್ದರು. ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ರಣನೀತಿ ರೂಪಿಸುವಲ್ಲಿ ಸೆಂಥಿಲ್‌ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್‌ ವಾರ್‌ರೂಮ್‌ ಮುಖ್ಯಸ್ಥನಾಗಿ ಅವರು ಬಿಜೆಪಿ ವಿರುದ್ಧ ಪೇಸಿಎಂ ಪೋಸ್ಟರ್‌ ಅಭಿಯಾನ ಸೇರಿ ಹಲವು ಪ್ರಚಾರ ಕಾರ್ಯಗಳನ್ನು ಯೋಜಿಸಿದ್ದರು. ಕಾಂಗ್ರೆಸ್‌ ಗೆಲುವಿನಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಿತ್ತು.
ಕರ್ನಾಟಕದಲ್ಲಿ ಐಪಿಎಸ್‌ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರೂ ವೃತ್ತಿಗೆ ರಾಜೀನಾಮೆ ನೀಡಿ ಪ್ರಸ್ತುತ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಅವರು ಅಧ್ಯಕ್ಷರಾದ ಬಳಿಕ ತಮಿಳುನಾಡಿನಲ್ಲಿ ಬಿಜೆಪಿ ಬಹಳ ಸದ್ದು ಮಾಡುತ್ತಿದ್ದು, ಅದನ್ನು ನೋಡಿ ಕಾಂಗ್ರೆಸ್‌ ಸೆಂಥಿಲ್‌ಗೆ ಜವಾಬ್ದಾರಿ ವಹಿಸಲು ಮುಂದಾಗಿದೆ.



















































































error: Content is protected !!
Scroll to Top