ಕಾರ್ಕಳ : ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೈಗೂಡಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಸಾಹಸಗಾಥೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯವಾಗಬೇಕೆಂದು ಕ್ಯಾ. ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.
ಅವರು ಎಸ್.ವಿ.ಟಿ. ವನಿತಾ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಗಿಲ್ ಯುದ್ಧವು ಭಾರತದ ಇತಿಹಾಸದಲ್ಲಿ ಮರೆಯಲಾಗದ ಘಟನೆ. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ದೇಶಭಕ್ತಿಯ ಭಾವನೆಗಳನ್ನು ತಂದ ಸಂದರ್ಭ ಅದಾಗಿದೆ. ಭಾರತೀಯ ಸೈನಿಕರ ಕೆಚ್ಚೆದೆಯ ಹೋರಾಟವು ಈ ದೇಶದ ಎಲ್ಲಾ ನಾಗರಿಕರಿಗೆ ಸ್ಫೂರ್ತಿಯಾಗಿದೆ. ಪ್ರತಿಯೋರ್ವ ಭಾರತೀಯನೂ ದೇಶಕ್ಕಾಗಿ ತಾನು ಏನು ಕೊಡಬಹುದೆಂದು ಯೋಚಿಸಿ ಆ ನಿಟ್ಟಿನಲ್ಲಿ ಮುಂದುವರಿಯಬೇಕೆಂದರು.
ಎಸ್.ವಿ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಪಿ. ಶೆಣೈ ಅಧ್ಯಕ್ಷತೆ ವಹಿಸಿದರು. ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ರಾಮದಾಸ್ ಪ್ರಭು, ಪ್ರೌಢ ಶಾಲಾ ವಿಭಾಗದ ಹಿರಿಯ ಸಹ ಶಿಕ್ಷಕ ಯೋಗೇಂದ್ರ ನಾಯಕ್, ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಮಾಲಿನಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಪದ್ಮಪ್ರಭ ಇಂದ್ರ ಸ್ವಾಗತಿಸಿ, ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸುನಿಲ್ ಎಸ್. ಶೆಟ್ಟಿ ವಂದಿಸಿದರು.




































