ಟ್ವೀಟ್ ಮಾಡಿದ್ದು ದೊಡ್ಡ ಅಪರಾಧವೊ, ವೀಡಿಯೋ ಮಾಡಿದ್ದು ಅಪರಾಧವೊ ? – ಕಿಡಿಕಾರಿದ ಸುನಿಲ್ ಕುಮಾರ್
ಕಾರ್ಕಳ : ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಹತ್ತಿಕ್ಕುವ ಹಿಟ್ಲರ್ ಸರಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾರಂಭಿಸಿದ್ದಾರೆ. ಉಡುಪಿಯಲ್ಲಿ ನೊಂದ ವಿದ್ಯಾರ್ಥಿನಿಯರ ಪರ ಧ್ವನಿ ಎತ್ತಿದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಸರಕಾರ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ ಎಂದು ಮಾಜಿ ಸಚಿವ, ಶಾಸಕ ವಿ. ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಪ್ಪೇನಿದೆ..?
ಸಂತ್ರಸ್ತೆಯರ ಪರವಾಗಿ ಧ್ವನಿ ಎತ್ತುವುದು ತಪ್ಪು ಎಂದಾದರೆ ಕಾಂಗ್ರೆಸ್ ಸರಕಾರದಲ್ಲಿ ಮಹಿಳೆಯರ ಹಕ್ಕು, ಮಾನ- ಸಮ್ಮಾನದ ಬಗ್ಗೆ ಗೌರವ ಇಲ್ಲವೆಂದು ಅರ್ಥವೇ ? ನಿಮ್ಮ ಮನೆಯ ಹೆಣ್ಣು ಮಕ್ಕಳಿಗೂ ಅಪಮಾನವಾದರೆ ಸಹಿಸುತ್ತೀರಾ ಎಂದು ಶಕುಂತಲಾ ಪ್ರಶ್ನಿಸಿದ್ದರಲ್ಲಿ ತಪ್ಪೇನಿದೆ ? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.

ಬೂಟಾಟಿಕೆ ನಿಲ್ಲಿಸಿ
ಹಿಟ್ಲರ್, ಮುಸಲೋನಿಯವರನ್ನೇ ಮೀರಿಸುವ ಸರ್ವಾಧಿಕಾರಿ ನೀವು. ಅಭಿವ್ಯಕ್ತಿ ಸ್ವಾತಂತ್ರ್ಯ, ಸ್ತ್ರೀ ಸಮಾನತೆ, ಸಂವಿಧಾನದ ಆಶಯ ಎಂಬ ಶಬ್ದಗಳನ್ನು ಬಳಸುವುದಕ್ಕೆ ನೀವು ಅನರ್ಹ. ಸಾಕು ಮಾಡಿ ಸೋಗು. ಸಿದ್ದರಾಮಯ್ಯನವರೇ ಇನ್ನಾದರೂ ನಿಮ್ಮ ಬೂಟಾಟಿಕೆ ನಿಲ್ಲಿಸಿ ಎಂದು ಸುನಿಲ್ ಕುಮಾರ್ ನೇರವಾಗಿ ಆಗ್ರಹಿಸಿದ್ದಾರೆ.
ಯಾವುದು ಅಪರಾಧ ?
ದಮ್ಮು, ತಾಕತ್ತಿನ ಬಗ್ಗೆ ವೀರಾವೇಶದಿಂದ ಮಾತನಾಡುವ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪೊಲೀಸರಿಗೆ ಉಡುಪಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವುದಕ್ಕೆ ತಾಕತ್ತಿಲ್ಲ. ವೀಡಿಯೋ ಪ್ರಕರಣದ ಬಗ್ಗೆ ಟ್ವೀಟ್ ಮಾಡಿ ರಾಜ್ಯದ ಗಮನ ಸೆಳೆದ ರಶ್ಮಿಯವರ ಮನೆಗೆ ರಾತ್ರೋರಾತ್ರಿ ತೆರಳಿ ವಿಚಾರಣಾ ಹಿಂಸೆ ಮಾಡುವ ಪೊಲೀಸರಿಗೆ ಸಹ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರ ಮನೆಗೆ ತೆರಳಿ ವಿಚಾರಣೆ ನಡೆಸುವ ತಾಕತ್ತಿಲ್ಲವೇ ? ಟ್ವೀಟ್ ಮಾಡಿದ್ದು ದೊಡ್ಡ ಅಪರಾಧವೊ, ವೀಡಿಯೋ ಮಾಡಿದ್ದು ಅಪರಾಧವೊ ? ಎಂದು ಪ್ರಶ್ನಿಸಿದ್ದಾರೆ.
ಯಾರಿಗೆ ಗೃಹ ಸಚಿವರು ?
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರೇ, ಹಾಂಡ್ ಗ್ರೆನೈಡ್ ಹಾಗೂ ಸ್ಫೋಟಕಗಳನ್ನು ಮನೆಯಲ್ಲಿಟ್ಟುಕೊಂಡವರನ್ನು ಉಗ್ರರು ಎನ್ನುವುದಕ್ಕೆ ನಿಮಗೆ ಶಕ್ತಿಯಿಲ್ಲ. ಪೊಲೀಸ್ ಠಾಣೆಗೆ ಬೆಂಕಿ ಹಾಕಿದವರು ನಿಮ್ಮ ದೃಷ್ಟಿಯಲ್ಲಿ ಅಮಾಯಕರು. ಆದರೆ ಉಡುಪಿ ಕಾಲೇಜಿನಲ್ಲಿ ನಡೆದಿದ್ದು, ತಮಾಷೆ ಪ್ರಕರಣ, ಮಕ್ಕಳಾಟ. ನೀವು ಕರ್ನಾಟಕದ ಗೃಹ ಸಚಿವರೋ ಅಥವಾ ಒಂದು ವರ್ಗಕ್ಕೋ ? ಎಂದು ಅವರು ಲೇವಡಿ ಮಾಡಿದ್ದಾರೆ.






































