ವನಮಹೋತ್ಸವ ಕಾಟಾಚಾರದ ಕಾರ್ಯಕ್ರಮವಾಗದಿರಲಿ
ಕಾರ್ಕಳ : ವನಮಹೋತ್ಸವ ಕಾಟಾಚಾರದ ಕಾರ್ಯಕ್ರಮವಾಗದೇ ಫಲಪ್ರದವಾಗಬೇಕು. ಪ್ರತಿ ಮನೆಗೊಂದು ಗಿಡ ನೀಡುವ ಮೂಲಕ ಅರಣ್ಯ ಇಲಾಖೆ ಪ್ರಕೃತಿ ರಕ್ಷಣೆ ಮಾಡಬೇಕೆಂದು ಮುಂಡ್ಕೂರು ಪಂಚಾಯತ್ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಅಭಿಪ್ರಾಯಪಟ್ಟರು.
ಜು. 27ರಂದು ಪಂಚಾಯತ್ನ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಸುಶೀಲಾ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಮೂಡಬಿದ್ರೆ ವಲಯ ಅರಣ್ಯಾಧಿಕಾರಿ ರಾಜೂ ಗೌಡ ತಮ್ಮ ಇಲಾಖೆ ಕುರಿತು ಮಾಹಿತಿ ನೀಡುತ್ತಿದ್ದ ವೇಳೆ ಗ್ರಾಮಸ್ಥರು ಈ ರೀತಿಯ ಸಲಹೆ ನೀಡಿದರು. ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಪಂಚಾಯತ್ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ ತಿಳಿಸಿದರು. ಅಲಂಗಾರುಗುಡ್ಡೆಯ ಬಳಿ ಕುಸಿತದ ಭೀತಿಯಲ್ಲಿರುವ ಮರ ತೆರವಿಗೆ ಸದಸ್ಯ ಅಶೋಕ್ ಶೆಟ್ಟಿ ಆಗ್ರಹಿಸಿದರು.

ರಾಜ್ಯ ಸರಕಾರದ ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆ ಕುರಿತು ಮೆಸ್ಕಾಂ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಮುಂಡ್ಕೂರು ಬೀಟ್ ಪೊಲೀಸ್ ಈರಣ್ಣ ಮಾತನಾಡಿ, ಪೊಲೀಸರಿಗೆ ಕರ್ತವ್ಯ ಸಂದರ್ಭ ಗ್ರಾಮಸ್ಥರ ಸಹಕಾರ ನೀಡುವಂತೆ ವಿನಂತಿಸಿದರು. ಈ ವೇಳೆ ಮಾತನಾಡಿದ ಉದಯ ಶೆಟ್ಟಿ ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದರು.
ಪರವಾನಿಗೆ ಪಡೆಯಬೇಕು
ಅಬಕಾರಿ ಇಲಾಖೆಯ ಅಧಿಕಾರಿ ಪುಂಡಲೀಕ ಉಪಾದ್ಯ ಮಾತನಾಡಿ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಮದ್ಯ ವಿತರಣೆಗೂ ಇಲಾಖೆಯ ಪರವಾನಗಿ ಪಡೆಯಬೇಕು. ಗಾಂಜಾ, ಡ್ರಗ್ಸ್ ಬಗ್ಗೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಕಂಡು ಬಂದಲ್ಲಿ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡುವಂತೆ ಕೇಳಿಕೊಂಡರು.
ಕೃಷಿ ಇಲಾಖೆಯ ಸಿದ್ಧಪ್ಪ ನೋಡೆಲ್ ಅಧಿಕಾರಿಯಾಗಿ ಸಹಕರಿಸಿದರು. ಲೋಕೋಪಯೋಗಿ ಇಲಾಖೆಯ ರಂಜೀತ್ ಕುಮಾರ್, ಶಿಕ್ಷಣ ಇಲಾಖೆಯ ಪರವಾಗಿ ಸಿಆರ್ಪಿ ಚಂದ್ರಕಾಂತ ಡೇಸಾ, ಕಂದಾಯ ಇಲಾಖೆಯ ಹಣಮಂತ, ತೋಟಗಾರಿಕಾ ಇಲಾಖೆಯ ಕುಮಾರ್, ಪಂಚಾಯತ್ ಮಾಜಿ ಅಧ್ಯಕ್ಷ ಸತ್ಯಶಂಕರ ಶೆಟ್ಟಿ, ಹಾಲಿ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ, ಪಿಡಿಒ ಸತೀಶ್, ಕಾರ್ಯದರ್ಶಿ ಸಾಧು ಶೆಟ್ಟಿ ಉಪಸ್ಥಿತರಿದ್ದರು. ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.































































