ಶಕ್ತಿ ಯೋಜನೆ ಬಳಿಕ ಕೆಲಸದ ಒತ್ತಡ ಹೆಚ್ಚಾದದ್ದು ಕಾರಣ
ಕಲಬುರಗಿ: ಮಂಡ್ಯದಲ್ಲಿ ಇತ್ತೀಚೆಗೆ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ರಾಜಕೀಯ ವಿವಾದವಾದ ಬೆನ್ನಿಗೆ ಇನ್ನೋರ್ವ ಚಾಲಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಸಂಭವಿಸಿದೆ. ಕೆಲಸದ ಒತ್ತಡಕ್ಕೆ ಬೇಸತ್ತು ಕೆಕೆಆರ್‌ಟಿಸಿ ಚಾಲಕ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಕಲಬುರಗಿಯಲ್ಲಿ ನಡೆದಿದೆ. ಡಿಪೋ ಮ್ಯಾನೇಜರ್ ಕಿರುಕುಳ ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಡಿಪೋ ಮ್ಯಾನೇಜರ್ ಸರಿಯಾಗಿ ಡ್ಯೂಟಿ ನೀಡುತ್ತಿಲ್ಲ. ಹೆಚ್ಚುವರಿ ಕೆಲಸ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಚಾಲಕ ಹಾಗೂ ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ಬೀರಣ್ಣ ಆರೋಪಿಸಿದ್ದಾರೆ. ಹೀಗಾಗಿ ಕಿರುಕುಳಕ್ಕೆ ಬೇಸತ್ತು ಡಿಪೋದಲ್ಲಿಯೇ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡೀಸೆಲ್ ಸುರಿದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ, ಅನಾಹುತವನ್ನು ತಡೆದಿದ್ದಾರೆ.
ಕಲಬುರಗಿಯಿಂದ ಅಫಜಲಪುರಕ್ಕೆ ಪ್ರತಿನಿತ್ಯ 8 ಸಿಂಗಲ್ ಟ್ರಿಪ್ ಹೋಗಿ ಬರಲು ಸೂಚನೆ ಇತ್ತು. 8 ಸಿಂಗಲ್ ಆಗದೆ ಇದ್ದರೆ ಮರುದಿನ ಡ್ಯೂಟಿ ಕೊಡದೆ ಡಿಪೋ ಮ್ಯಾನೇಜರ್ ಮಂಜುನಾಥ ಕಿರಿಕಿರಿ ಮಾಡುತ್ತಿದ್ದರು. ಇದರಿಂದ ಬೇಸತ್ತ ಡ್ರೈವರ್ ಡಿಪೋದಲ್ಲಿದ್ದ ಡಿಸೇಲ್ ತೆಗೆದುಕೊಂಡು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಶಕ್ತಿ ಯೋಜನೆ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಡ್ರೈವರ್‌ಗಳಿಗೆ ಹೆಚ್ಚುವರಿ ಶೆಡ್ಯೂಲ್ ಹಾಕಲಾಗಿದೆ. ಇದನ್ನು ಮಾಡಲು ಆಗಲ್ಲ ಎನ್ನುತ್ತಿದ್ದರು. ಪ್ರಯಾಣಿಕರ ಸಂಖ್ಯೆಯಲ್ಲಿ ಗಣನಿಯ ಏರಿಕೆ ಹಿನ್ನೆಲೆ ಟ್ರಿಪ್ ಹೆಚ್ಚು ಮಾಡಲಾಗಿತ್ತು. ಇದರಿಂದಾಗಿ ಡ್ರೈವರ್ ಬೀರಣ್ಣ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಾಮಾನ್ಯವಾಗಿ 6 ಟ್ರಿಪ್ ಇತ್ತು. ಈಗ 8 ಟ್ರಿಪ್ ಮಾಡಲಾಗಿತ್ತು. ಟ್ರಿಪ್ ಸಂಖ್ಯೆ ಹೆಚ್ಚು ಮಾಡಿದಕ್ಕಾಗಿ ಎಲ್ಲರಿಗೂ ತೊಂದರೆಯಾಗಿದೆ. ಹಿಂದಿನ ವರದಿ ತೆಗೆದು ನೋಡಿದಾಗ ನಮ್ಮ ಡಿಪೊಗೆ ಉತ್ತಮ ರೆಕಾರ್ಡ್ ಇದೆ. ಹೊಸ ಬಸ್ ಹಾಗೂ ಸಿಬ್ಬಂದಿ ಬರಲಿದ್ದಾರೆ. ಆಗ ಈ ಟ್ರಿಪ್ ಲೋಡ್ ಕಡಿಮೆಯಾಗುತ್ತದೆ. ಅಲ್ಲಿಯವರೆಗೂ ಚಾಲಕ ಮತ್ತು ನಿರ್ವಾಹಕರು ಸಹಕರಿಸಬೇಕೆಂದು ಕೆಕೆಆರ್‌ಟಿಸಿ ಡಿಸಿ ಸಿದ್ದಪ್ಪ ಗಂಗಾಧರ್ ಸಿದ್ದಪ್ಪ ಮನವಿ ಮಾಡಿದ್ದಾರೆ.
ಇತ್ತೀಚೆಗೆ ವರ್ಗಾವಣೆಗೆ ಮನನೊಂದು ಮಂಡ್ಯ ಜಿಲ್ಲೆಯ ನಾಗಮಂಗಲದ ಕೆಎಸ್ಆರ್‌ಟಿಸಿ ಚಾಲಕ ಜಗದೀಶ್ ಎಂಬವರು ಡಿಪೋ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪ್ರಕರಣದಲ್ಲಿ ಸಚಿವ ಚಲುವರಾಯಸ್ವಾಮಿ ಹೆಸರು ಕೇಳಿ ಬಂದಿತ್ತು.






























































